ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಯೊಹೋಶುವ ೨೦

ತರುವಾಯ ಯೆಹೋವನು ಯೆಹೋಶುವನಿಗೆ,

“ನಾನು ಮೋಶೆಯ ಮೂಲಕ ನಿನಗೆ ಆಜ್ಞಾಪಿಸಿದಂತೆ ಕೆಲವು ನಗರಗಳನ್ನು ವಿಶೇಷ ಆಶ್ರಯನಗರಗಳನ್ನಾಗಿ ಗೊತ್ತುಪಡಿಸು.

ನಿಮ್ಮಲ್ಲಿ ಒಬ್ಬನು ತಿಳಿಯದೆ ಆಕಸ್ಮಿಕವಾಗಿ ನರಹತ್ಯ ಮಾಡಿದರೆ ಅವನು ಯಾವುದಾದರೊಂದು ಆಶ್ರಯನಗರಕ್ಕೆ ಹೋಗಿ ಅಡಗಿಕೊಳ್ಳಲಿ.

“ಆಶ್ರಯನಗರಕ್ಕೆ ಓಡಿಹೋದವನು ಆ ಪಟ್ಟಣದ ಪ್ರವೇಶದ್ವಾರದಲ್ಲಿ ನಿಂತು ಅಲ್ಲಿಯ ಜನನಾಯಕರಿಗೆ ನಡೆದ ಸಂಗತಿಯನ್ನು ತಿಳಿಸಲಿ. ಆಗ ನಾಯಕರು ಅವನಿಗೆ ನಗರವನ್ನು ಪ್ರವೇಶಿಸಲು ಅನುಮತಿ ಕೊಡಲಿ; ತಮ್ಮ ಜೊತೆಯಲ್ಲಿ ವಾಸಿಸಲು ಒಂದು ಸ್ಥಳವನ್ನು ಕೊಡಲಿ.

ಆದರೆ ಅವನನ್ನು ಬೆನ್ನಟ್ಟಿಕೊಂಡು ಬಂದವನು ಆಶ್ರಯನಗರಕ್ಕೆ ಬಂದರೆ, ಆ ನಗರದ ನಾಯಕರು ಕೊಂದವನನ್ನು ಬೆನ್ನಟ್ಟಿ ಬಂದವನ ಕೈಗೆ ಒಪ್ಪಿಸಬಾರದು. ಆಶ್ರಯಕೋರಿ ಅವರಲ್ಲಿಗೆ ಬಂದ ವ್ಯಕ್ತಿಯನ್ನು ಅವರು ರಕ್ಷಿಸಬೇಕು. ಯಾಕೆಂದರೆ ಆ ನರಹತ್ಯವು ಆಕಸ್ಮಿಕವಾದದ್ದೇ ಹೊರತು ದ್ವೇಷದಿಂದ ಮಾಡಿದ್ದಲ್ಲ.

ಆ ನಗರದ ನ್ಯಾಯಾಸ್ಥಾನದಲ್ಲಿ ನ್ಯಾಯನಿರ್ಣಯವಾಗುವವರೆಗೂ ಮತ್ತು ಮಹಾಯಾಜಕನು ಜೀವದಿಂದ ಇರುವವರೆಗೂ ಅವನು ಅಲ್ಲಿಯೇ ಇರಬೇಕು. ತರುವಾಯ ಅವನು ತಾನು ಬಿಟ್ಟುಬಂದ ಊರಿನ ತನ್ನ ಮನೆಗೆ ಹೋಗಬಹುದು” ಎಂದು ಹೇಳಿದನು.

ಆದ್ದರಿಂದ ಇಸ್ರೇಲರು “ಆಶ್ರಯನಗರಗಳನ್ನಾಗಿ” ಕೆಲವು ನಗರಗಳನ್ನು ಆರಿಸಿದರು. ಅವು ಯಾವುವೆಂದರೆ: ನಫ್ತಾಲಿ ಕುಲದವರ ಪರ್ವತ ಪ್ರದೇಶವಾದ ಗಲಿಲಾಯ ಪ್ರಾಂತ್ಯದಲ್ಲಿನ ಕೆದೆಷ್; ಎಫ್ರಾಯೀಮ್ ಪರ್ವತ ಪ್ರದೇಶದಲ್ಲಿನ ಶೆಕೆಮ್; ಯೆಹೂದ್ಯರ ಬೆಟ್ಟದ ಸೀಮೆಯಲ್ಲಿನ ಹೆಬ್ರೋನ್ ಎಂಬ ಕಿರ್ಯತರ್ಬ.

ಜೆರಿಕೊವಿನ ಹತ್ತಿರ ಜೋರ್ಡನ್ ನದಿಯ ಪೂರ್ವದಲ್ಲಿದ್ದ ರೂಬೇನ್ಯರ ಪ್ರಾಂತ್ಯದ ಅರಣ್ಯಪ್ರದೇಶದಲ್ಲಿನ ಬೆಚೆರ್, ಗಾದ್ಯರಿಗೆ ಸೇರಿದ ಗಿಲ್ಯಾದ್ ಪ್ರಾಂತ್ಯದಲ್ಲಿನ ರಾಮೋತ್; ಮನಸ್ಸೆಯವರಿಗೆ ಸೇರಿದ ಬಾಷಾನಿನಲ್ಲಿರುವ ಗೋಲಾನ್.

ಇಸ್ರೇಲಿನವನಾಗಲಿ ಅಥವಾ ಅವರೊಂದಿಗೆ ಇರುವ ಒಬ್ಬ ಪರದೇಶಿಯನಾಗಲಿ ಆಕಸ್ಮಿಕವಾಗಿ ನರಹತ್ಯೆ ಮಾಡಿದ್ದರೆ ಒಂದು ಆಶ್ರಯನಗರಕ್ಕೆ ಓಡಿಹೋಗಲು ಅವಕಾಶವಿತ್ತು. ಯಾವನೇ ಆಗಲಿ ಮತ್ತೊಬ್ಬನನ್ನು ಆಕಸ್ಮಿಕವಾಗಿ ಕೊಂದರೆ ಆ ಪಟ್ಟಣಗಳಲ್ಲಿ ಆಶ್ರಯ ಪಡೆಯಬಹುದಾಗಿತ್ತು; ಅಲ್ಲಿ ಸುರಕ್ಷಿತವಾಗಿ ವಾಸಿಸಬಹುದಾಗಿತ್ತು. ಬೆನ್ನಟ್ಟಿ ಬಂದವನು ಅವನನ್ನು ಕೊಲ್ಲಲು ಸಾಧ್ಯವಿರಲಿಲ್ಲ. ಕೊಲೆ ಮಾಡಿದವನಿಗೆ ಆ ಪಟ್ಟಣದ ನ್ಯಾಯಾಲಯವೇ ತೀರ್ಪು ನೀಡುತ್ತಿತ್ತು.

Kannada Bible 1934
Public Domain: 1934