ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಸಂಖ್ಯಾಕಾಂಡ ೧೦

ಯೆಹೋವನು ಮೋಶೆಗೆ ಆಜ್ಞಾಪಿಸಿದ್ದೇನೆಂದರೆ:

“ನೀನು ಬೆಳ್ಳಿಯ ತಗಡುಗಳಿಂದ ಎರಡು ತುತ್ತೂರಿಗಳನ್ನು ಮಾಡಿಸಬೇಕು. ಜನಸಮೂಹದವರನ್ನು ಒಟ್ಟಾಗಿ ಕರೆಸುವುದಕ್ಕೂ ಅವರು ಯಾವಾಗ ಹೊರಡಬೇಕೆಂದು ಹೇಳುವುದಕ್ಕೂ ಇವುಗಳನ್ನು ಉಪಯೋಗಿಸಬೇಕು.

ನೀನು ಎರಡು ತುತ್ತೂರಿಗಳನ್ನು ಲಬುಸ್ವರದಿಂದ ಊದಿಸುವಾಗ ಜನಸಮೂಹದವರೆಲ್ಲರೂ ನಿನ್ನ ಹತ್ತಿರ ದೇವದರ್ಶನಗುಡಾರದ ಪ್ರವೇಶದ್ವಾರದ ಬಳಿಯಲ್ಲಿ ಕೂಡಿರಬೇಕು.

ಆದರೆ ನೀನು ಒಂದು ತುತ್ತೂರಿಯನ್ನು ಮಾತ್ರ ಊದಿಸಿದರೆ ಇಸ್ರೇಲಿನ ಕುಲಪ್ರಧಾನರಾದ ಮುಖ್ಯಸ್ಥರು ಮಾತ್ರ ನಿನ್ನನ್ನು ಸಂಧಿಸಲು ಬರಬೇಕು.

“ಜನರ ಕುಲಗಳು ಪಾಳೆಯದಿಂದ ಪ್ರಯಾಣ ಮಾಡಬೇಕೆಂಬುದಕ್ಕೆ ಸೂಚನೆಗಾಗಿ ತುತ್ತೂರಿಯನ್ನು ಆರ್ಭಟದಿಂದ ಊದಿಸಬೇಕು. ನೀವು ಮೊದಲನೆ ಸಲ ತುತ್ತೂರಿಯನ್ನು ಆರ್ಭಟದಿಂದ ಊದಿಸುವಾಗ ದೇವದರ್ಶನಗುಡಾರದ ಪೂರ್ವ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು.

ನೀವು ಎರಡನೆಯ ಸಲ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸುವಾಗ ದೇವದರ್ಶನಗುಡಾರದ ದಕ್ಷಿಣ ದಿಕ್ಕಿನಲ್ಲಿ ಪಾಳೆಯ ಹಾಕಿಕೊಂಡಿರುವ ಕುಲಗಳು ಹೊರಡಬೇಕು.

ಆದರೆ ಜನಸಮುದಾಯವು ಕೂಡಿಬರಬೇಕಾದಾಗ ತುತ್ತೂರಿಗಳನ್ನು ಲಬುಸ್ವರದಲ್ಲಿ ಊದಿಸಬೇಕೇ ಹೊರತು ಆರ್ಭಟ ಸ್ವರದಲ್ಲಲ್ಲ.

ಯಾಜಕರಾದ ಆರೋನನ ಪುತ್ರರು ಮಾತ್ರವೇ ಆ ತುತ್ತೂರಿಗಳನ್ನು ಊದಬೇಕು. ಇದು ನಿಮಗೂ ನಿಮ್ಮ ಸಂತತಿಯವರಿಗೂ ಶಾಶ್ವತ ನಿಯಮ.

“ನೀವು ಸ್ವದೇಶವನ್ನು ಸೇರಿದ ಮೇಲೆ ನಿಮ್ಮ ಶತ್ರುಗಳನ್ನು ಎದುರಿಸುವುದಕ್ಕಾಗಿ ಯುದ್ಧಕ್ಕೆ ಹೊರಡುವಾಗ ತುತ್ತೂರಿಗಳನ್ನು ಆರ್ಭಟ ಸ್ವರದಲ್ಲಿ ಊದಿಸಬೇಕು. ಆಗ ನಿಮ್ಮ ದೇವರಾದ ಯೆಹೋವನು ನಿಮ್ಮನ್ನು ಜ್ಞಾಪಕಮಾಡಿಕೊಂಡು ಶತ್ರುಗಳಿಂದ ನಿಮ್ಮನ್ನು ರಕ್ಷಿಸುವನು.

೧೦

ಇದಲ್ಲದೆ, ನೀವು ಉತ್ಸವಕಾಲಗಳಲ್ಲಿಯೂ ಹಬ್ಬಗಳಲ್ಲಿಯೂ ಅಮಾವಾಸ್ಯೆಯಲ್ಲಿಯೂ ಸರ್ವಾಂಗಹೋಮಗಳನ್ನೂ ಸಮಾಧಾನಯಜ್ಞಗಳನ್ನೂ ಸಮರ್ಪಿಸುವಾಗ ಆ ತುತ್ತೂರಿಗಳನ್ನು ಊದಿಸಬೇಕು. ನಿಮ್ಮನ್ನು ಗಮನಿಸಬೇಕೆಂದು ಆ ತುತ್ತೂರಿ ಧ್ವನಿಗಳು ನಿಮ್ಮ ದೇವರಿಗೆ ನೆನಪನ್ನುಂಟುಮಾಡುತ್ತವೆ. ನೀವು ಇದನ್ನು ಮಾಡಬೇಕೆಂದು ನಾನು ಆಜ್ಞಾಪಿಸುತ್ತೇನೆ. ನಿಮ್ಮ ದೇವರಾದ ಯೆಹೋವನು ನಾನೇ.”

೧೧

ಇಸ್ರೇಲರು ಈಜಿಪ್ಟನ್ನು ಬಿಟ್ಟ ನಂತರದ ಎರಡನೆಯ ವರ್ಷದ ಎರಡನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ ಮೇಘವು ಒಡಂಬಡಿಕೆಯ ಗುಡಾರದಿಂದ ಮೇಲೆ ಎದ್ದಿತು.

೧೨

ಆದ್ದರಿಂದ, ಇಸ್ರೇಲರು ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಅವರು ಸೀನಾಯಿ ಮರುಭೂಮಿಯನ್ನು ಬಿಟ್ಟು ಮೇಘವು ಪಾರಾನ್ ಮರುಭೂಮಿಯಲ್ಲಿ ನಿಲ್ಲುವವರೆಗೆ ಪ್ರಯಾಣ ಮಾಡಿದರು.

೧೩

ಯೆಹೋವನು ಮೋಶೆಯ ಮೂಲಕ ಕೊಟ್ಟ ಸೂಚನೆಯ ಪ್ರಕಾರ ಅವರು ಮೊಟ್ಟಮೊದಲನೆಯ ಸಲ ಪ್ರಯಾಣವನ್ನು ಆರಂಭಿಸಿದರು.

೧೪

ಮೊದಲು ಯೆಹೂದ ಪಾಳೆಯದ ಮೂರು ದಂಡುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀನಾದ್ವಾನ ಮಗನಾದ ನಹಶೋನನು ಯೆಹೂದ ಕುಲದ ಸೇನಾಧಿಪತಿಯಾಗಿದ್ದನು.

೧೫

ಚೂವಾರನ ಮಗನಾದ ನೆತನೇಲನು ಇಸ್ಸಾಕಾರನ ಕುಲದ ಸೇನಾಧಿಪತಿ.

೧೬

ಹೇಲೋನನ ಮಗನಾದ ಎಲೀಯಾಬನು ಜೆಬುಲೂನ್ ಕುಲದ ಸೇನಾಧಿಪತಿ.

೧೭

ಬಳಿಕ ಪವಿತ್ರ ಗುಡಾರವನ್ನು ಕೆಳಗಿಳಿಸಲಾಯಿತು. ಗೇರ್ಷೋನ್ ಮತ್ತು ಮೆರಾರೀ ಕುಲಗಳ ಗಂಡಸರು ಪವಿತ್ರ ಗುಡಾರವನ್ನು ಹೊತ್ತುಕೊಂಡು ಅವರ ಹಿಂದೆ ಹೊರಟರು.

೧೮

ಅವರ ತರುವಾಯ ರೂಬೇನ್ ಕುಲದಿಂದ ಮುನ್ನಡೆಸಲ್ಪಟ್ಟ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಹೊರಟರು. ಶೆದೇಯೂರನ ಮಗನಾದ ಎಲೀಚೂರನು ರೂಬೇನ್ ಕುಲದ ಸೇನಾಧಿಪತಿಯಾಗಿದ್ದನು. ಇಸ್ರೇಲರ ಪ್ರಯಾಣ

೧೯

ಚೂರೀಷದ್ದೈನ ಮಗನಾದ ಶೆಲುಮೀಯೇಲನು ಸಿಮೆಯೋನ್ ಕುಲದ ಸೇನಾಧಿಪತಿ.

೨೦

ದೆಗೂವೇಲನ ಮಗನಾದ ಎಲ್ಯಾಸಾಫನು ಗಾದ್ ಕುಲದ ಸೇನಾಧಿಪತಿ.

೨೧

ಬಳಿಕ ಕೆಹಾತನ ಕುಲದವರು ಹೊರಟರು. ಅವರು ದೇವಸ್ಥಾನದ ಪವಿತ್ರವಸ್ತುಗಳನ್ನು ಹೊತ್ತುಕೊಂಡಿದ್ದರು. ಕೆಹಾತ್ಯರು ಪವಿತ್ರವಸ್ತುಗಳೊಡನೆ ಬರುವಷ್ಟರೊಳಗೆ ಇತರ ಲೇವಿಯರು ದೇವದರ್ಶನಗುಡಾರವನ್ನು ಎತ್ತಿ ನಿಲ್ಲಿಸಿದರು.

೨೨

ಬಳಿಕ ಎಫ್ರಾಯೀಮ್ ಪಾಳೆಯದಿಂದ ಮೂರು ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಹೂದನ ಮಗನಾದ ಎಲೀಷಾಮನು ಎಫ್ರಾಯೀಮ್ ಕುಲದ ಸೇನಾಧಿಪತಿ.

೨೩

ಪೆದಾಚೂರನ ಮಗನಾದ ಗಮ್ಲೀಯೇಲನು ಮನಸ್ಸೆ ಕುಲದ ಸೇನಾಧಿಪತಿ.

೨೪

ಗಿದ್ಯೋನಿಯ ಮಗನಾದ ಅಬೀದಾನನು ಬೆನ್ಯಾಮೀನ್ ಕುಲದ ಸೇನಾಧಿಪತಿ.

೨೫

ಆಮೇಲೆ ಎಲ್ಲಾ ಕುಲಗಳ ಹಿಂಭಾಗದಲ್ಲಿ ದಾನ್ ಕುಲದಿಂದ ಮುನ್ನಡೆಸಲ್ಪಟ್ಟ ಗುಂಪುಗಳು ಹೊರಟವು. ಅವರು ತಮ್ಮ ಧ್ವಜದೊಂದಿಗೆ ಪ್ರಯಾಣ ಮಾಡಿದರು. ಅಮ್ಮೀಷದ್ದೈನ ಮಗನಾದ ಅಹೀಗೆಜೆರನು ದಾನ್ ಕುಲದ ಸೇನಾಧಿಪತಿ.

೨೬

ಆಶೇರನ ಕುಲಕ್ಕೆ ಒಕ್ರಾನನ ಮಗನಾದ ಪಗೀಯೇಲನು ಸೇನಾಧಿಪತಿಯಾಗಿದ್ದನು.

೨೭

ನಫ್ತಾಲಿ ಕುಲಕ್ಕೆ ಏನಾನನ ಮಗನಾದ ಅಹೀರನು ಸೇನಾಧಿಪತಿಯಾಗಿದ್ದನು.

೨೮

ಈ ರೀತಿಯಾಗಿ ಇಸ್ರೇಲರು ತಮ್ಮ ಗುಂಪುಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡಿದರು.

೨೯

ಹೋಬಾಬನು ಮಿದ್ಯಾನ್ಯನಾದ ರೆಗೂವೇಲನ ಮಗನು. ರೆಗೂವೇಲನು ಮೋಶೆಯ ಮಾವ. ಮೋಶೆಯು ಹೋಬಾಬನಿಗೆ, “ದೇವರು ನಮಗೆ ಕೊಡುತ್ತೇನೆಂದು ವಾಗ್ದಾನ ಮಾಡಿದ ದೇಶಕ್ಕೆ ನಾವು ಪ್ರಯಾಣ ಮಾಡುತ್ತಿದ್ದೇವೆ. ನಮ್ಮೊಂದಿಗೆ ಬಾ. ನೀನು ನಮ್ಮೊಂದಿಗೆ ಉದ್ದಾರವಾಗುವೆ; ಯಾಕೆಂದರೆ ಯೆಹೋವನು ಇಸ್ರೇಲರಿಗೆ ಒಳ್ಳೆಯವುಗಳನ್ನು ವಾಗ್ದಾನ ಮಾಡಿದ್ದಾನೆ.”

೩೦

ಆದರೆ ಹೋಬಾಬನು, “ಇಲ್ಲ. ನಾನು ನಿಮ್ಮೊಂದಿಗೆ ಬರುವುದಿಲ್ಲ. ನಾನು ನನ್ನ ದೇಶಕ್ಕೂ ನನ್ನ ಜನರ ಬಳಿಗೂ ಹೋಗುವೆನು” ಎಂದು ಉತ್ತರಕೊಟ್ಟನು.

೩೧

ಆಗ ಮೋಶೆ, “ದಯಮಾಡಿ ನಮ್ಮನ್ನು ಬಿಟ್ಟು ಹೋಗಬೇಡ. ನಾವು ಮರುಭೂಮಿಯಲ್ಲಿ ಎಲ್ಲಿ ಪಾಳೆಯ ಮಾಡಿಕೊಳ್ಳಬಹುದೆಂಬುದು ನಿನಗೆ ಗೊತ್ತಿದೆ. ನೀನು ನಮ್ಮ ಮಾರ್ಗದರ್ಶಕನಾಗಿರಬಹುದು.

೩೨

ನೀನು ನಮ್ಮೊಂದಿಗೆ ಬಂದರೆ, ಯೆಹೋವನು ನಮಗೆ ಕೊಡುವ ಎಲ್ಲಾ ಒಳ್ಳೆಯ ವಸ್ತುಗಳಲ್ಲಿ ನಿನಗೆ ಪಾಲು ಕೊಡುವೆವು” ಎಂದು ಹೇಳಿದನು.

೩೩

ಅವರು ಯೆಹೋವನ ಬೆಟ್ಟದಿಂದ ಹೊರಟು ಮೂರು ದಿನ ಪ್ರಯಾಣ ಮಾಡಿದರು. ಲೇವಿಯರು ಹೊತ್ತುಕೊಂಡಿದ್ದ ಯೆಹೋವನ ಒಡಂಬಡಿಕೆ ಪೆಟ್ಟಿಗೆಯು ಮತ್ತೆ ಪಾಳೆಯ ಹಾಕಲು ಯೋಗ್ಯವಾದ ಸ್ಥಳವನ್ನು ಎದುರು ನೋಡುತ್ತಾ ಜನರ ಮುಂದೆ ಮೂರು ದಿನಗಳವರೆಗೆ ಹೋಯಿತು.

೩೪

ಅವರು ಪಾಳೆಯದೊಡನೆ ಹೊರಟಾಗ ಪ್ರತಿದಿನವೂ ಯೆಹೋವನ ಮೋಡವು ಅವರ ಮೇಲಿರುತ್ತಿತ್ತು.

೩೫

ಜನರು ಪವಿತ್ರ ಪೆಟ್ಟಿಗೆಯನ್ನು ಎತ್ತಿಕೊಂಡು ಹೊರಡುವಾಗ, ಮೋಶೆಯು, “ಯೆಹೋವನೇ, ಎದ್ದೇಳು! ನಿನ್ನ ವೈರಿಗಳು ಚದರಿಹೋಗಲಿ, ನಿನ್ನ ಶತ್ರುಗಳು ಬೆನ್ನುಕೊಟ್ಟು ಓಡಿಹೋಗಲಿ” ಎಂದು ಹೇಳುತ್ತಿದ್ದನು.

೩೬

ಪವಿತ್ರ ಪೆಟ್ಟಿಗೆಯು ಕೆಳಗಿಳಿಸಲ್ಪಟ್ಟಾಗ, ಮೋಶೆಯು, “ಯೆಹೋವನೇ ಇಸ್ರೇಲರ ಲಕ್ಷಾಂತರ ಕುಟುಂಬಗಳ ಬಳಿಗೆ ಹಿಂತಿರುಗಿ ಬಾ” ಎಂದು ಹೇಳುತ್ತಿದ್ದನು.

Kannada Bible 1934
Public Domain: 1934