ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಯೆಶಾಯನ ೫೧

“ಒಳ್ಳೆಯವರಾಗಿ ಜೀವಿಸಲು ಬಹಳವಾಗಿ ಪ್ರಯತ್ನಿಸುತ್ತಿರುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ. ನಿಮ್ಮ ಪಿತೃವಾದ ಅಬ್ರಹಾಮನನ್ನೇ ದೃಷ್ಟಿಸಿ ನೋಡಿರಿ; ಆ ಬಂಡೆಯೊಳಗಿಂದಲೇ ನೀವು ತೆಗೆಯಲ್ಪಟ್ಟಿದ್ದೀರಿ.

ನಿಮ್ಮ ಪಿತೃವಾದ ಅಬ್ರಹಾಮನನ್ನೂ ನಿಮ್ಮ ಮಾತೆಯಾದ ಸಾರಳನ್ನೂ ದೃಷ್ಟಿಸಿರಿ; ನಾನು ಕರೆದಾಗ ಅಬ್ರಹಾಮನು ಒಬ್ಬಂಟಿಗನಾಗಿದ್ದನು. ನಾನು ಅವನನ್ನು ಆಶೀರ್ವದಿಸಿ, ಅವನ ಸಂತಾನವನ್ನು ಅಭಿವೃದ್ಧಿಪಡಿಸಿ, ಅವನನ್ನು ಮಹಾಜನಾಂಗದ ಮೂಲಪುರುಷನನ್ನಾಗಿ ಮಾಡಿದೆನು.”

ಅದೇ ರೀತಿಯಲ್ಲಿ ಯೆಹೋವನು ಚೀಯೋನನ್ನು ಮತ್ತು ನಿರ್ಜನವಾದ ಅದರ ಸ್ಥಳಗಳನ್ನು ಆದರಿಸುವನು; ಅವರಿಗಾಗಿ ಮಹಾದೊಡ್ಡ ಕಾರ್ಯವನ್ನು ಮಾಡುವನು. ಯೆಹೋವನು ಮರುಭೂಮಿಯನ್ನು ಏದೆನ್ ಉದ್ಯಾನವನದಂತೆ ಮಾಡುವನು. ಆ ದೇಶವು ಬರಿದಾಗಿತ್ತು. ಆದರೆ ಅದು ಯೆಹೋವನ ಉದ್ಯಾನವನವಾಗುವದು. ಅದರೊಳಗಿರುವ ಜನರು ಸಂತೋಷಭರಿತರಾಗುವರು. ಅವರು ತಮ್ಮ ಸಂತೋಷವನ್ನು ವ್ಯಕ್ತಪಡಿಸುವರು. ಅವರು ಕೃತಜ್ಞತಾಸ್ತುತಿ ಮಾಡುವರು, ಜಯಗೀತೆಯನ್ನು ಹಾಡುವರು.

“ನನ್ನ ಜನರೇ, ನನ್ನ ಮಾತನ್ನು ಕೇಳಿರಿ. ನನ್ನ ಕಟ್ಟಳೆ ಮತ್ತು ನ್ಯಾಯ ಬೆಳಕಿನಂತಿದ್ದು ಹೇಗೆ ಜೀವಿಸಬೇಕೆಂಬುದನ್ನು ಜನರಿಗೆ ತೋರಿಸುತ್ತವೆ.

ನಾನು ನ್ಯಾಯವಂತನೆಂದು ನಿಮಗೆ ಬೇಗನೆ ತೋರಿಸುವೆನು. ನಿಮ್ಮನ್ನು ಬೇಗನೆ ರಕ್ಷಿಸುವೆನು. ನಾನು ನನ್ನ ಸಾಮರ್ಥ್ಯದಿಂದ ಎಲ್ಲಾ ಜನಾಂಗಗಳಿಗೆ ನ್ಯಾಯತೀರಿಸುವೆನು. ದೂರದೇಶದವರು ನನಗೋಸ್ಕರ ಕಾಯುತ್ತಿದ್ದಾರೆ. ಅವರು ತಮ್ಮ ರಕ್ಷಣೆಗಾಗಿ ನನ್ನ ಶಕ್ತಿಯನ್ನು ಎದುರುನೋಡುತ್ತಿದ್ದಾರೆ.

ಪರಲೋಕದ ಕಡೆಗೆ ದೃಷ್ಟಿಸಿರಿ. ನಿಮ್ಮ ಸುತ್ತಲೂ ಇರುವ ಭೂಮಿಯನ್ನು ನೋಡಿರಿ. ಹೊಗೆಯ ಮೋಡದಂತೆ ಆಕಾಶವು ಇಲ್ಲದೆಹೋಗುವದು. ಭೂಮಿಯು ಬೆಲೆಯಿಲ್ಲದ ಹಳೆಯ ಬಟ್ಟೆಯಂತಾಗುವುದು. ಭೂಮಿಯ ಮೇಲಿರುವ ಜನರು ಸಾಯುವರು. ಆದರೆ ನನ್ನ ರಕ್ಷಣೆಯು ನಿರಂತರವಾಗಿರುವದು. ನನ್ನ ಕರುಣೆಯು ಅಂತ್ಯವಾಗದು.

ಒಳ್ಳೆಯತನವನ್ನು ಅರ್ಥಮಾಡಿಕೊಂಡ ನೀವು ನನ್ನ ಮಾತುಗಳನ್ನು ಕೇಳಿರಿ. ನನ್ನ ಬೋಧನೆಯನ್ನು ಅನುಸರಿಸುವ ನೀವು ನನ್ನ ಮಾತಿಗೆ ಕಿವಿಗೊಡಿರಿ. ದುಷ್ಟಜನರಿಗೆ ಭಯಪಡಬೇಡಿರಿ. ಅವರು ನಿಮಗೆ ಹೇಳುವ ಕೆಟ್ಟಮಾತುಗಳಿಗೆ ಭಯಪಡಬೇಡಿ.

ಯಾಕೆಂದರೆ ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು. ಅವರು ಉಣ್ಣೆಯಂತಿರುವರು, ನುಸಿಯು ಅದನ್ನು ತಿಂದುಬಿಡುವುದು. ಆದರೆ ನನ್ನ ಒಳ್ಳೆಯತನವು ಶಾಶ್ವತವಾದದ್ದು. ನನ್ನ ರಕ್ಷಣೆಯು ಸದಾಕಾಲವಿರುವುದು.”

ಯೆಹೋವನ ಭುಜಬಲವೇ, ಎಚ್ಚರಗೊಳ್ಳು ಎಚ್ಚರಗೊಳ್ಳು, ಬಲವನ್ನು ಹೊಂದಿಕೊ! ಪುರಾತನ ಕಾಲದಲ್ಲಿ ಮಾಡಿದಂತೆಯೇ ನಿನ್ನ ಶಕ್ತಿಯನ್ನು ತೋರು. ನಿನ್ನ ಶಕ್ತಿಯಿಂದ ನೀನು ರಹಬನ್ನು ಸೋಲಿಸಿರುವೆ. ದೈತ್ಯಾಕಾರದ ಮೃಗವನ್ನು ಸೋಲಿಸಿರುವೆ.

೧೦

ನೀನು ಸಮುದ್ರವನ್ನು ಬತ್ತಿಸಿರುವೆ. ಮಹಾ ಆಳದ ಗುಂಡಿಗಳ ನೀರನ್ನು ನೀನು ಬತ್ತಿಸಿರುವೆ. ಅತ್ಯಂತ ಆಳವಾದ ಸಮುದ್ರದ ತಳವನ್ನು ನೀನು ರಸ್ತೆಯನ್ನಾಗಿ ಮಾಡಿರುವೆ. ನಿನ್ನ ಜನರು ಆ ರಸ್ತೆಯಲ್ಲಿ ಸಮುದ್ರವನ್ನು ದಾಟಿ ರಕ್ಷಿಸಲ್ಪಟ್ಟರು.

೧೧

ಯೆಹೋವನು ತನ್ನ ಜನರನ್ನು ರಕ್ಷಿಸುತ್ತಾನೆ. ಅವರು ಚೀಯೋನಿಗೆ ಸಂತೋಷದಿಂದ ಮರಳಿ ಬರುತ್ತಾರೆ. ಅವರು ಬಹಳ ಸಂತೋಷಪಡುವರು. ಅವರ ಹರ್ಷವು ಅವರ ತಲೆಯ ಮೇಲೆ ಕಿರೀಟದಂತೆ ನಿತ್ಯಕಾಲಕ್ಕೂ ಇರುವುದು. ಅವರು ಹರ್ಷದಿಂದ ಹಾಡುವರು. ಅವರ ದುಃಖವೆಲ್ಲಾ ಬಹುದೂರವಾಗುವುದು.

೧೨

ಯೆಹೋವನು ಹೇಳುವುದೇನೆಂದರೆ, “ನಿನ್ನನ್ನು ಸಂತೈಸುವಾತನು ನಾನೇ. ಆದ್ದರಿಂದ ನೀನು ಜನರಿಗೆ ಯಾಕೆ ಹೆದರಬೇಕು. ಅವರು ಹುಟ್ಟಿ ಸಾಯುವ ನರರಾಗಿದ್ದಾರೆ. ಅವರು ಹುಲ್ಲಿನಂತೆ ಸಾಯುವ ಕೇವಲ ಮಾನವರಾಗಿದ್ದಾರೆ.”

೧೩

ಯೆಹೋವನು ನಿನ್ನನ್ನು ಸೃಷ್ಟಿಸಿದ್ದಾನೆ. ತನ್ನ ಶಕ್ತಿಯಿಂದ ಭೂಮಿಯನ್ನು ಸೃಷ್ಟಿಸಿದವನು ಆತನೇ. ಆತನು ತನ್ನ ಶಕ್ತಿಯಿಂದ ಭೂಮಿಯ ಮೇಲೆ ಆಕಾಶವನ್ನು ಹರಡಿದ್ದಾನೆ. ಆದರೆ ನೀನು ಆತನನ್ನೂ ಆತನ ಶಕ್ತಿಯನ್ನೂ ಮರೆತುಬಿಟ್ಟೆ ಆದ್ದರಿಂದಲೇ ನಿನಗೆ ಕೇಡುಮಾಡುವ ದುಷ್ಟರಿಗೆ ನೀನು ಯಾವಾಗಲೂ ಹೆದರಿಕೊಂಡಿರುವೆ. ಅವರು ನಿನ್ನನ್ನು ನಾಶಮಾಡಲು ಆಲೋಚಿಸಿದ್ದಾರೆ. ಈಗ ಅವರೆಲ್ಲಿದ್ದಾರೆ? ಅವರೆಲ್ಲಾ ಹೋಗಿಬಿಟ್ಟಿದ್ದಾರೆ.

೧೪

ಸೆರೆಯಲ್ಲಿರುವವರು ಬೇಗನೆ ಬಿಡುಗಡೆ ಹೊಂದುವರು. ಅವರು ಸೆರೆಮನೆಯಲ್ಲಿ ಸತ್ತು ಕೊಳೆಯುವುದಿಲ್ಲ. ಅವರಿಗೆ ತಿನ್ನಲು ಬೇಕಾದಷ್ಟು ಊಟವಿರುವದು.

೧೫

“ಯೆಹೋವನೆಂಬ ನಾನೇ ನಿಮ್ಮ ದೇವರು. ನಾನು ಸಾಗರವನ್ನು ಕದಡಿಸಿ ತೆರೆಗಳನ್ನು ಬರಮಾಡುತ್ತೇನೆ.” (ಸರ್ವಶಕ್ತನು ಎಂಬುದೇ ನನ್ನ ಹೆಸರು.)

೧೬

“ನನ್ನ ಸೇವಕನೇ, ನೀನು ಹೇಳತಕ್ಕ ಇಷ್ಟವಾದ ಮಾತುಗಳನ್ನು ನಿನ್ನ ಬಾಯಲ್ಲಿಡುತ್ತೇನೆ. ನಾನು ನನ್ನ ಕೈಗಳಿಂದ ನಿನ್ನನ್ನು ಮುಚ್ಚಿ ಕಾಪಾಡುವೆನು. ಹೊಸ ಭೂಮ್ಯಾಕಾಶಗಳನ್ನು ನಿರ್ಮಿಸಲು ನಾನು ನಿನ್ನನ್ನು ಉಪಯೋಗಿಸುತ್ತೇನೆ. ಚೀಯೋನಿಗೆ, ‘ನೀವು ನನ್ನ ಜನರು’ ಎಂದು ಹೇಳುವದಕ್ಕೆ ನಿನ್ನನ್ನು ಉಪಯೋಗಿಸುತ್ತೇನೆ.”

೧೭

ಜೆರುಸಲೇಮೇ, ಎಚ್ಚರಗೊಳ್ಳು; ಎದ್ದೇಳು; ಯೆಹೋವನು ನಿನ್ನ ಮೇಲೆ ಬಹಳವಾಗಿ ಕೋಪಗೊಂಡು ನಿನ್ನನ್ನು ಶಿಕ್ಷಿಸಿದ್ದಾನೆ. ಆ ಶಿಕ್ಷೆಯು ವಿಷತುಂಬಿದ ಪಾತ್ರೆಯಂತಿದೆ. ನೀನು ಅದನ್ನು ಕುಡಿಯಲೇಬೇಕಿತ್ತು. ಈಗ ನೀನು ಅದನ್ನು ಕುಡಿದಿರುವೆ.

೧೮

ಜೆರುಸಲೇಮಿನಲ್ಲಿ ಅನೇಕ ಜನರಿದ್ದರೂ ಅವರಲ್ಲಿ ಯಾರೂ ಅವಳಿಗಾಗಿ ನಾಯಕರಾಗಲಿಲ್ಲ. ಆಕೆಯು ಅನೇಕ ಮಕ್ಕಳನ್ನು ಪಡೆದವಳಾಗಿದ್ದರೂ ಆಕೆಯನ್ನು ನಡೆಸಲು ಮಾರ್ಗದರ್ಶಕರು ಯಾರೂ ಆಗಲಿಲ್ಲ.

೧೯

ಜೆರುಸಲೇಮಿಗೆ ತೊಂದರೆಗಳು ಎರಡು ಗುಂಪುಗಳಾಗಿ ಬಂದವು: ಲೂಟಿ ಮತ್ತು ಕೊರತೆ; ಕ್ಷಾಮ ಮತ್ತು ಖಡ್ಗ. ನೀನು ಸಂಕಟ ಅನುಭವಿಸುವಾಗ ಯಾರೂ ನಿನಗೆ ಸಹಾಯ ಮಾಡಲಿಲ್ಲ. ಯಾರೂ ನಿನಗೆ ಕರುಣೆ ತೋರಿಸಲಿಲ್ಲ.

೨೦

ನಿನ್ನ ಜನರು ಬಲಹೀನರಾದರು. ಅವರು ನೆಲದ ಮೇಲೆ ಬಿದ್ದು ಅಲ್ಲಿಯೇ ಮಲಗಿದರು. ಆ ಜನರು ರಸ್ತೆಯ ಮೂಲೆಮೂಲೆಗಳಲ್ಲಿ ಬಿದ್ದುಕೊಂಡಿರುತ್ತಾರೆ. ಅವರು ಬಲೆಯೊಳಗೆ ಸಿಕ್ಕಿಬಿದ್ದ ಜಿಂಕೆಯಂತಿರುವರು. ಯೆಹೋವನ ಕೋಪದಿಂದ ಇನ್ನೂ ಹೆಚ್ಚಿನ ಶಿಕ್ಷೆಯನ್ನು, ತಾಳಲಾರದಷ್ಟು ಶಿಕ್ಷೆಯನ್ನು ಅನುಭವಿಸಿದರು. ದೇವರು ಇನ್ನೂ ಹೆಚ್ಚಾಗಿ ಶಿಕ್ಷೆಕೊಡುವುದಾಗಿ ಹೇಳಿದಾಗ ಅವರು ಕಂಗಾಲಾದರು.

೨೧

ಜೆರುಸಲೇಮೇ, ನನಗೆ ಕಿವಿಗೊಡು. ನೀನು ಅಮಲೇರಿದವಳಂತೆ ಶಕ್ತಿಹೀನಳಾಗಿರುವೆ. ನೀನು ಕುಡಿದು ಅಮಲೇರುವುದು ದ್ರಾಕ್ಷಾರಸದಿಂದಲ್ಲ, ವಿಷದಿಂದಷ್ಟೇ.

೨೨

ನಿನ್ನ ದೇವರೂ ಒಡೆಯನೂ ಆಗಿರುವ ಯೆಹೋವನು ತನ್ನ ಜನರಿಗಾಗಿ ಯುದ್ಧ ಮಾಡುವನು. ಅವನು ನಿನಗೆ ಹೇಳುವುದೇನೆಂದರೆ, “ಇಗೋ, ನಾನು ನಿನ್ನಿಂದ ವಿಷದ ಪಾತ್ರೆಯನ್ನು (ಶಿಕ್ಷೆ) ತೆಗೆದುಬಿಡುತ್ತೇನೆ. ಇನ್ನು ಮುಂದೆ ನನ್ನ ಸಿಟ್ಟಿನಿಂದ ನೀನು ಶಿಕ್ಷಿಸಲ್ಪಡುವದಿಲ್ಲ.

೨೩

ಈಗ ನನ್ನ ಕೋಪದ ದೆಸೆಯಿಂದ ನಿನಗೆ ಹಾನಿ ಮಾಡಿದವರನ್ನು ಶಿಕ್ಷಿಸುವೆನು. ಅವರು ನಿನ್ನನ್ನು ಕೊಲ್ಲಲು ಪ್ರಯತ್ನಿಸಿದರು. ‘ನಮ್ಮ ಮುಂದೆ ಸಾಷ್ಟಾಂಗಬೀಳು. ಆಗ ನಿನ್ನ ಮೇಲೆ ನಾವು ನಡೆಯುವೆವು’ ಎಂದು ಹೇಳಿದರು. ಅವರಿಗೆ ಅಡ್ಡಬೀಳಲು ನಿನ್ನನ್ನು ಬಲಾತ್ಕರಿಸಿದರು. ಆ ಬಳಿಕ ಅವರು ನೀನು ಮಣ್ಣಿನ ಧೂಳೋ ಎಂಬಂತೆ ನಿನ್ನ ಬೆನ್ನಿನ ಮೇಲೆ ನಡೆದಾಡಿದರು. ನೀನು ಅವರಿಗೆ ನಡೆಯಲು ಬೀದಿಯಾದಿ.”

Kannada Bible 1934
Public Domain: 1934