ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಯೆಶಾಯನ ೧೫

ಇದು ಮೋವಾಬನ್ನು ಕುರಿತ ದುಃಖಕರವಾದ ಸಂದೇಶ: ಒಂದು ರಾತ್ರಿ ಮೋವಾಬಿನ ಆರ್ ಪಟ್ಟಣದಿಂದ ಸಂಪತ್ತನ್ನು ಸೈನ್ಯವು ಸೂರೆ ಮಾಡಿತು. ಆ ರಾತ್ರಿ ನಗರವು ನಾಶಮಾಡಲ್ಪಟ್ಟಿತು. ಒಂದು ರಾತ್ರಿ ಸೈನ್ಯವು ಮೋವಾಬಿನ ಕೀರ್ ಪಟ್ಟಣದಿಂದ ಸಂಪತ್ತನ್ನು ಸೂರೆ ಮಾಡಿತು. ಆ ರಾತ್ರಿ ಪಟ್ಟಣವು ಕೆಡವಲ್ಪಟ್ಟಿತು.

ಅರಸನ ಪರಿವಾರದವರು ಮತ್ತು ದೀಬೋನಿನ ಜನರು ಪೂಜಾಸ್ಥಳಕ್ಕೆ ದುಃಖಿಸಲು ಹೋಗುತ್ತಿದ್ದಾರೆ. ಮೋವಾಬಿನ ಜನರು ನೆಬೋ ಮತ್ತು ಮೇದೆಬದವರಿಗಾಗಿ ರೋಧಿಸುತ್ತಾರೆ. ಜನರು ತಮ್ಮ ಗಡ್ಡಗಳನ್ನೂ ತಲೆಗಳನ್ನೂ ಬೋಳಿಸಿ ತಮ್ಮ ದುಃಖವನ್ನು ಪ್ರದರ್ಶಿಸುತ್ತಾರೆ.

ಮೋವಾಬಿನ ಎಲ್ಲಾ ಕಡೆಗಳಲ್ಲೂ ಮನೆಯ ಚಾವಣಿಯ ಮೇಲೂ ಬೀದಿಗಳಲ್ಲೂ ಜನರು ಗೋಣಿತಟ್ಟುಗಳನ್ನು ಧರಿಸಿಕೊಂಡು ರೋಧಿಸುತ್ತಾರೆ.

ಹೆಷ್ಬೋನ್ ಮತ್ತು ಎಲೆಯಾಲೆಯಲ್ಲಿರುವ ಜನರು ಗಟ್ಟಿಯಾಗಿ ಅಳುತ್ತಿದ್ದಾರೆ. ದೂರದಲ್ಲಿರುವ ಯಹಜ್ ಪಟ್ಟಣದವರಿಗೆ ಅವರ ರೋಧನವು ಕೇಳಿಸುತ್ತದೆ. ಸೈನಿಕರೂ ಭಯಗೊಂಡಿದ್ದಾರೆ. ಹೆದರಿಕೆಯಿಂದ ನಡುಗುತ್ತಿದ್ದಾರೆ.

ಮೋವಾಬಿನ ಬಗ್ಗೆ ನನ್ನ ಹೃದಯವು ಮರುಗುತ್ತಿದೆ. ಜನರು ಸುರಕ್ಷತೆಗಾಗಿ ಅತ್ತಿತ್ತ ಓಡಾಡುತ್ತಿದ್ದಾರೆ. ಅವರು ಬಹುದೂರವಿರುವ ಚೋಯರಿಗೆ ಓಡುತ್ತಿದ್ದಾರೆ. ಎಗ್ಲತ್ ಶೆಲಿಶೀಯಕ್ಕೂ ಓಡುತ್ತಾರೆ. ಪರ್ವತಮಾರ್ಗವಾಗಿ ಲೂಹೀಥ್ ಗೆ ಹೋಗುತ್ತಿರುವಾಗ ಜನರು ಅಳುತ್ತಾ ಹೋಗುತ್ತಾರೆ. ಹೊರೊನಯಿಮಿಗೆ ಹೋಗುವ ಮಾರ್ಗದಲ್ಲಿ ಜನರು ಜೋರಾಗಿ ಅಳುತ್ತಾ ಹೋಗುತ್ತಿದ್ದಾರೆ.

ಆದರೆ ನಿಮ್ರೀಮ್ ಹಳ್ಳವು ಒಣಗಿಹೋಗಿ ಮರುಭೂಮಿಗೆ ಸಮಾನವಾಗಿದೆ. ಹಸಿಹುಲ್ಲುಗಳೆಲ್ಲಾ ಬಾಡಿವೆ; ಸಸಿಗಳೆಲ್ಲಾ ಸತ್ತಿವೆ; ಎಲ್ಲಿಯೂ ಹಸಿರು ಕಾಣಿಸುವದಿಲ್ಲ.

ಆದಕಾರಣ ಜನರು ತಮ್ಮ ವಸ್ತುಗಳನ್ನು ಒಟ್ಟಾಗಿ ಸೇರಿಸಿ ಮೋವಾಬನ್ನು ಬಿಟ್ಟುಹೋಗುತ್ತಿದ್ದಾರೆ. ಅವರು ತಮ್ಮ ವಸ್ತುಗಳನ್ನು ಹೊತ್ತುಕೊಂಡು ಪೊಪ್ಲಾರ್ ಹೊಳೆಯ ಬದಿಯಲ್ಲಿ ಗಡಿದಾಟುವರು.

ಮೋವಾಬ್ ದೇಶದಲ್ಲೆಲ್ಲಾ ಅಳುವ ಸದ್ದು ಕೇಳಿಸುತ್ತದೆ. ದೂರದಲ್ಲಿರುವ ಎಗ್ಲಯಿಮಿನಲ್ಲೂ ಜನರು ಅಳುತ್ತಿದ್ದಾರೆ. ಬೆಯೇರ್ ಏಲೀಮ್ ಪಟ್ಟಣದಲ್ಲೂ ಜನರು ರೋಧಿಸುತ್ತಾರೆ.

ದೀಮೋನಿನ ನೀರು ರಕ್ತಮಯವಾಗಿದೆ. ಮತ್ತು ಯೆಹೋವನಾದ ನಾನು ದೀಮೋನಿಗೆ ಇನ್ನೂ ಕೇಡುಗಳನ್ನು ಬರಮಾಡುವೆನು. ಮೋವಾಬಿನಲ್ಲಿ ವಾಸಿಸುವ ಕೆಲವೇ ಜನರು ಶತ್ರುಗಳಿಂದ ಪಾರಾಗಿದ್ದಾರೆ. ಆದರೆ ಅವರನ್ನು ಸಾಯಿಸಲು ನಾನು ಸಿಂಹಗಳನ್ನು ಕಳುಹಿಸುವೆನು.

Kannada Bible 1934
Public Domain: 1934