ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಕೀರ್ತನೆಗಳು ೧೩೭

ನಾವು ಬಾಬಿಲೋನ್ ದೇಶದ ನದಿಗಳ ಬಳಿಯಲ್ಲಿ ಕುಳಿತುಕೊಂಡು ಚೀಯೋನನ್ನು ನೆನಸಿಕೊಳ್ಳುತ್ತಾ ಅತ್ತೆವು.

ಸಮೀಪದಲ್ಲಿದ್ದ ನೀರವಂಜಿ ಮರಗಳಿಗೆ ನಾವು ನಮ್ಮ ಹಾರ್ಪ್‌ವಾದ್ಯಗಳನ್ನು ತೂಗುಹಾಕಿದೆವು.

ನಮ್ಮನ್ನು ಸೆರೆಹಿಡಿದಿದ್ದ ಜನರು ಬಾಬಿಲೋನಿನಲ್ಲಿ ನಮಗೆ ಚೀಯೋನಿನ ಕುರಿತು ಹರ್ಷಗೀತೆಗಳನ್ನು ಹಾಡಲು ಹೇಳಿದರು.

ಆದರೆ ಪರದೇಶದಲ್ಲಿ ಯೆಹೋವನ ಹಾಡುಗಳನ್ನು ನಾವು ಹಾಡುವಂತಿಲ್ಲ!

ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, ನಾನು ಮತ್ತೆಂದಿಗೂ ಹಾಡನ್ನು ಬಾರಿಸದಂತಾಗಲಿ.

ಜೆರುಸಲೇಮೇ, ನಿನ್ನನ್ನು ನಾನೆಂದಾದರೂ ಮರೆಯುವುದಾದರೆ, ನಾನು ಮತ್ತೆಂದಿಗೂ ಹಾಡಲು ಶಕ್ತನಾಗದಂತಾಗಲಿ. ಜೆರುಸಲೇಮೇ, ನಿನ್ನ ವಿಷಯದಲ್ಲೇ ನಾನು ಅತ್ಯಾನಂದಪಡುವೆನೆಂದು ಪ್ರಮಾಣ ಮಾಡುವೆ.

ಯೆಹೋವನೇ ನಿಶ್ಚಯವಾಗಿ ಎದೋಮ್ಯರನ್ನು ದಂಡಿಸು. ಯಾಕೆಂದರೆ ಜೆರುಸಲೇಮ್ ಸೆರೆಹಿಡಿಯಲ್ಪಟ್ಟಾಗ ಅವರು, “ಅದರ ಕಟ್ಟಡಗಳನ್ನು ಕೆಡವಿಹಾಕಿ. ಅವುಗಳನ್ನು ಅಸ್ತಿವಾರ ಸಹಿತ ಹಾಳುಮಾಡಿರಿ” ಎಂದು ಆರ್ಭಟಿಸಿದರು.

ಬಾಬಿಲೋನೇ, ನೀನು ನಾಶವಾಗುವೆ! ನಿನಗೆ ತಕ್ಕ ದಂಡನೆಯನ್ನು ಕೊಡುವವನು ಧನ್ಯನು. ನೀನು ನಮ್ಮನ್ನು ನೋಯಿಸಿದಂತೆ ನಿನ್ನನ್ನೂ ನೋಯಿಸುವವನು ಧನ್ಯನು.

ನಿನ್ನ ಮಕ್ಕಳನ್ನು ಹಿಡಿದು ಬಂಡೆಗೆ ಅಪ್ಪಳಿಸುವವನು ಧನ್ಯನು.

Kannada Bible 1934
Public Domain: 1934