ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934
← ೧೬

ಯೋಬನ ೧೭

೧೮ →

ನನ್ನ ಆತ್ಮವು ಒಡೆದುಹೋಗಿದೆ; ನನ್ನ ಜೀವಿತವು ಮುಗಿದುಹೋಗಿದೆ; ಸಮಾಧಿಯು ನನಗೋಸ್ಕರ ಕಾಯುತ್ತಿದೆ.

ಜನರು ನನ್ನ ಸುತ್ತಲೂ ನಿಂತುಕೊಂಡು ನನ್ನನ್ನು ನೋಡಿ ನಗುತ್ತಿದ್ದಾರೆ. ಅವರು ನನ್ನ ಕಣ್ಣೆದುರಿನಲ್ಲೇ ಗೇಲಿ ಮಾಡುತ್ತಾ ಅವಮಾನ ಮಾಡುತ್ತಿದ್ದಾರೆ.

“ದೇವರೇ, ಕೃಪೆ ತೋರಿ ನಾನು ನಿರಪರಾಧಿಯೆಂಬುದಕ್ಕೆ ನೀನೇ ನನಗೆ ಜಾಮೀನಾಗು. ನಾನು ನಿರಪರಾಧಿ ಎಂಬುದಕ್ಕೆ ಜಾಮೀನಾಗಲು ಯಾರೂ ಒಪ್ಪುತ್ತಿಲ್ಲ.

ನೀನು ನನ್ನ ಸ್ನೇಹಿತರ ಮನಸ್ಸುಗಳನ್ನು ಮುಚ್ಚಿಬಿಟ್ಟಿರುವೆ; ಅವರು ನನ್ನನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ಜಯವಾಗದಂತೆ ನೋಡಿಕೊ.

‘ಮನುಷ್ಯನು ತನ್ನ ಸ್ನೇಹಿತರಿಗೆ ಸಹಾಯಮಾಡಲು ತನ್ನ ಮಕ್ಕಳನ್ನೇ ಅಲಕ್ಷಿಸುತ್ತಾನೆ’ ಎಂಬ ಗಾದೆಯಿದೆ. ಆದರೆ ಈಗ ನನ್ನ ಸ್ನೇಹಿತರು ನನಗೆ ವಿರೋಧವಾಗಿ ಎದ್ದಿದ್ದಾರೆ.

“ದೇವರು ನನ್ನ ಹೆಸರನ್ನು ಪ್ರತಿಯೊಬ್ಬರಿಗೂ ಕೆಟ್ಟಪದವನ್ನಾಗಿ ಮಾಡಿದ್ದಾನೆ. ಜನರು ನನ್ನ ಮುಖಕ್ಕೆ ಉಗುಳುತ್ತಿದ್ದಾರೆ.

ನನ್ನ ಕಣ್ಣುಗಳು ಕುರುಡಾಗಿವೆ. ನಾನು ಬಹು ದುಃಖಿತನಾಗಿದ್ದೇನೆ; ಅತ್ಯಧಿಕವಾದ ನೋವಿನಲ್ಲಿದ್ದೇನೆ. ನನ್ನ ದೇಹವು ನೆರಳಿನಂತೆ ಬಹು ತೆಳ್ಳಗಾಗಿದೆ.

ನೀತಿವಂತರು ಇದನ್ನು ಕಂಡು ಗಲಿಬಿಲಿಗೊಂಡಿದ್ದಾರೆ. ನಿರಪರಾಧಿಗಳು ದೇವದೂಷಕರ ವಿಷಯದಲ್ಲಿ ಗಲಿಬಿಲಿಗೊಂಡಿದ್ದಾರೆ.

ನೀತಿವಂತರು ಸನ್ಮಾರ್ಗದಲ್ಲಿ ಜೀವಿಸುವರು. ನಿರಪರಾಧಿಗಳು ಸದ್ಗುಣದಲ್ಲಿ ಬಲವಾಗುತ್ತಲೇ ಇರುವರು.

೧೦

“ಆದರೆ ನೀವೆಲ್ಲರೂ ಬನ್ನಿರಿ, ನನ್ನ ತಪ್ಪನ್ನು ತೋರಿಸಿರಿ. ನಿಮ್ಮಲ್ಲಿ ಒಬ್ಬ ಜ್ಞಾನಿಯೂ ಇಲ್ಲ.

೧೧

ನನ್ನ ಜೀವಿತವು ಮುಗಿದುಹೋಗುತ್ತಿದೆ. ನನ್ನ ಯೋಜನೆಗಳು ನಾಶವಾಗಿವೆ; ನನ್ನ ನಿರೀಕ್ಷೆಯು ಇಲ್ಲವಾಗಿದೆ.

೧೨

ರಾತ್ರಿಯನ್ನು ಹಗಲನ್ನಾಗಿ ಪರಿವರ್ತಿಸುವ, ಬೆಳಕನ್ನು ಕತ್ತಲೆಯನ್ನಾಗಿ ಮಾಡುವ ನನ್ನ ನಿರೀಕ್ಷೆಗಳು ಇಲ್ಲವಾಗಿವೆ.

೧೩

“ನಾನು ನಿರೀಕ್ಷಿಸುತ್ತಿರುವ ಮನೆಯು ಕೇವಲ ಸಮಾಧಿಯಾಗಿದ್ದರೆ, ನನ್ನ ಹಾಸಿಗೆಯನ್ನು ಕತ್ತಲೆಯಲ್ಲಿ ಹಾಸಿಕೊಂಡಿದ್ದರೆ,

೧೪

ನಾನು ಸಮಾಧಿಗೆ, ‘ನೀನೇ ನನ್ನ ತಂದೆ’ಯೆಂದು ಹುಳವಿಗೆ, ‘ನೀನೇ ನನ್ನ ತಾಯಿ, ನೀನೇ ನನ್ನ ತಂಗಿ’ ಎಂದು ಹೇಳುವುದಾದರೆ,

೧೫

ನನಗೆ ನಿರೀಕ್ಷೆಯೇ ಇಲ್ಲ. ನನ್ನ ನಿರೀಕ್ಷೆಯನ್ನು ಯಾರೂ ನೋಡಲಾರರು.

೧೬

ನನ್ನ ನಿರೀಕ್ಷೆಯು ಮರಣದ ಸ್ಥಳಕ್ಕೆ ಇಳಿದು ಹೋಗುವುದೇ? ನಾವು ಒಟ್ಟಾಗಿ ಧೂಳಿಗೆ ಇಳಿದುಹೋಗುತ್ತೇವೋ?”

Kannada Bible 1934
Public Domain: 1934