ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಯೋಬನ ೧೩

ಯೋಬನು ಹೇಳಿದನು: “ಇಗೋ, ಇವುಗಳನ್ನೆಲ್ಲ ನನ್ನ ಕಣ್ಣುಗಳು ಕಂಡಿವೆ; ಕಿವಿಗಳು ಕೇಳಿ ಗ್ರಹಿಸಿಕೊಂಡಿವೆ.

ನಿಮಗೆ ತಿಳಿದಿರುವುದು ನನಗೂ ತಿಳಿದಿದೆ. ನಾನು ನಿಮಗಿಂತ ಕಡಿಮೆಯಲ್ಲ.

ಆದರೆ ನಾನು ನಿಮ್ಮೊಂದಿಗೆ ವಾದಮಾಡದೆ ಸರ್ವಶಕ್ತನಾದ ದೇವರೊಂದಿಗೆ ಮಾತಾಡುವೆನು; ನನ್ನ ಕಷ್ಟಗಳ ಕುರಿತು ಆತನೊಂದಿಗೆ ವಾದಿಸುವೆನು.

ನೀವಾದರೋ ನಿಮ್ಮ ಆ ಜ್ಞಾನವನ್ನು ಸುಳ್ಳುಗಳಿಂದ ಮುಚ್ಚಲು ಪ್ರಯತ್ನಿಸುತ್ತಿದ್ದೀರಿ. ನೀವೆಲ್ಲರೂ ಗುಣಪಡಿಸಲಾಗದ ವೈದ್ಯರುಗಳಂತಿದ್ದೀರಿ.

ನೀವು ಬಾಯಿಮುಚ್ಚಿಕೊಂಡು ಸುಮ್ಮನಿದ್ದರೆ ಎಷ್ಟೋ ಒಳ್ಳೆಯದು. ನೀವು ಮಾಡಬಹುದಾದ ಜ್ಞಾನದ ಕಾರ್ಯ ಅದೊಂದೇ.

“ಈಗ ನನ್ನ ವಾದಕ್ಕೆ ಕಿವಿಗೊಡಿ. ನಾನು ಹೇಳುವುದನ್ನು ಕೇಳಿ.

ನೀವು ದೇವರಿಗಾಗಿ ಸುಳ್ಳಾಡುವಿರಾ? ಆತನಿಗಾಗಿ ಅನ್ಯಾಯದ ವಾದಗಳನ್ನು ಬಳಸುವಿರಾ?

ನೀವು ದೇವರಿಗೆ ಮುಖದಾಕ್ಷಿಣ್ಯವನ್ನು ತೋರಿಸುವಿರಾ? ನ್ಯಾಯಾಲಯದಲ್ಲಿ ಆತನಿಗಾಗಿ ವಾದಿಸಲು ಹೋಗುವಿರಾ?

ದೇವರು ನಿಮ್ಮನ್ನು ಸೂಕ್ಷ್ಮವಾಗಿ ಪರಿಶೋಧಿಸಿದರೆ ನೀವು ನೀತಿವಂತರಾಗಿ ಕಂಡುಬರುವಿರಾ? ಜನರಿಗೆ ಮೋಸ ಮಾಡುವಂತೆ ದೇವರಿಗೂ ಮೋಸ ಮಾಡಬಹುದೆಂದು ಯೋಚಿಸಿಕೊಂಡಿದ್ದೀರಾ?

೧೦

ನೀವು ನ್ಯಾಯಾಲಯದಲ್ಲಿ ರಹಸ್ಯವಾಗಿ ಪಕ್ಷಪಾತ ಮಾಡಿದರೆ ಆತನು ನಿಮ್ಮನ್ನು ಖಂಡಿಸೇ ಖಂಡಿಸುವನು.

೧೧

ಆತನ ಪ್ರಕಾಶಮಾನವಾದ ಮಹಿಮೆಯು ನಿಮ್ಮನ್ನು ಹೆದರಿಸುವುದಿಲ್ಲವೇ? ನೀವು ಆತನಿಗೆ ಭಯಪಡುವುದಿಲ್ಲವೇ?

೧೨

ನೀವಾಡುವ ಸ್ಮರಣೀಯ ನುಡಿಗಳು ಬೂದಿಗೆ ಸಮಾನವಾಗಿವೆ. ನಿಮ್ಮ ವಾದಗಳು ಮಣ್ಣಿನಷ್ಟೇ ಬಲಹೀನವಾಗಿವೆ.

೧೩

“ಸುಮ್ಮನಿರಿ, ಮಾತಾಡಲು ನನಗೆ ಅವಕಾಶ ಕೊಡಿ! ನನಗೆ ಏನಾಗಬೇಕೋ ಆಗಲಿ.

೧೪

ನಾನು ನನ್ನನ್ನು ಅಪಾಯಕ್ಕೊಡ್ಡುವೆನು; ನನ್ನ ಜೀವವನ್ನು ಕೈಯಲ್ಲಿ ಹಿಡಿದುಕೊಂಡಿರುವೆನು.

೧೫

ದೇವರು ನನ್ನನ್ನು ಕೊಂದರೂ ಆತನಲ್ಲಿಯೇ ಭರವಸವಿಟ್ಟಿರುವೆನು. ನನ್ನ ನಡತೆಯ ಕುರಿತು ಆತನ ಮುಂದೆ ವಾದಿಸುವೆನು.

೧೬

ನಾನು ನಿರಪರಾಧಿಯೆಂದು ಆಗ ರುಜುವಾತಾಗುವುದು. ಯಾಕೆಂದರೆ, ದೇವರನ್ನು ಮುಖಾಮುಖಿಯಾಗಿ ಸಂಧಿಸಲು ದುಷ್ಟನಿಗೆ ಸಾಧ್ಯವೇ ಇಲ್ಲ.

೧೭

ನಾನು ಹೇಳುವುದನ್ನು ಗಮನವಿಟ್ಟು ಕೇಳಿ. ನನ್ನ ವಿವರಣೆಯನ್ನು ನಿಮ್ಮ ಕಿವಿಗಳು ಕೇಳಲಿ.

೧೮

ನನ್ನ ಪರವಾಗಿ ವಾದಿಸಲು ಈಗ ಸಿದ್ಧವಾಗಿದ್ದೇನೆ. ನಾನು ನಿರಪರಾಧಿಯೆಂದು ನನಗೆ ಗೊತ್ತದೆ.

೧೯

ನಾನು ತಪ್ಪಿತಸ್ಥನೆಂದು ಯಾವನೂ ನಿರೂಪಿಸಲಾರನು. ನಿರೂಪಿಸಬಲ್ಲವನಿದ್ದರೆ ಬಾಯಿ ಮುಚ್ಚಿಕೊಳ್ಳುವೆನು.

೨೦

“ದೇವರೇ, ನನಗಾಗಿ ಎರಡು ಕಾರ್ಯಗಳನ್ನು ಮಾಡಬೇಡ, ಆಗ ನನ್ನನ್ನು ನಿನಗೆ ಮರೆಮಾಡಿಕೊಳ್ಳುವುದಿಲ್ಲ.

೨೧

ನನ್ನ ಮೇಲೆತ್ತಿರುವ ನಿನ್ನ ಕೈಯಿಂದ ನನ್ನನ್ನು ದಂಡಿಸಬೇಡ, ಭಯಾನಕವಾದವುಗಳಿಂದ ನನ್ನನ್ನು ಹೆದರಿಸಬೇಡ.

೨೨

ಆಗ ನೀನು ಕರೆದರೆ, ನಾನು ಉತ್ತರಕೊಡುವೆನು. ಇಲ್ಲವೇ ನಾನು ಕರೆಯುವೆ, ನೀನು ಉತ್ತರಕೊಡು.

೨೩

ನಾನು ಎಷ್ಟು ಪಾಪಗಳನ್ನು ಮಾಡಿರುವೆ? ನಾನೇನು ತಪ್ಪು ಮಾಡಿರುವೆ? ನನ್ನ ತಪ್ಪನ್ನೂ ಪಾಪವನ್ನೂ ನನಗೆ ತೋರಿಸು.

೨೪

ದೇವರೇ, ನೀನೇಕೆ ನನಗೆ ಮರೆಯಾಗಿರುವೆ? ನನ್ನನ್ನೇಕೆ ನಿನ್ನ ಶತ್ರುವೆಂದು ಪರಿಗಣಿಸಿರುವೆ?

೨೫

ಒಣಗಿದ ಎಲೆಯಂತಿರುವ ನನ್ನನ್ನು ಹೆದರಿಸುವಿಯಾ? ಹುಲ್ಲುಕಡ್ಡಿಯಂತಿರುವ ನನ್ನ ಮೇಲೆ ಆಕ್ರಮಣ ಮಾಡುವಿಯಾ?

೨೬

ದೇವರೇ, ನೀನು ನನಗೆ ಕಠಿಣವಾದ ದಂಡನೆಗಳನ್ನು ವಿಧಿಸಿರುವೆ. ನನ್ನ ಯೌವನದ ಪಾಪಗಳ ದೆಸೆಯಿಂದ ನನ್ನನ್ನು ಸಂಕಟಪಡಿಸಿರುವೆ.

೨೭

ನೀನು ನನ್ನ ಕಾಲುಗಳಿಗೆ ಕೋಳವನ್ನು ಹಾಕಿರುವೆ. ನಾನಿಡುವ ಪ್ರತಿಯೊಂದು ಹೆಜ್ಜೆಯನ್ನು ನೀನು ಸೂಕ್ಷ್ಮವಾಗಿ ಗಮನಿಸಿ ನನ್ನ ಹೆಜ್ಜೆಗಳಿಗೆ ಮೇರೆಗಳನ್ನು ಹಾಕಿರುವೆ.

೨೮

ಆದ್ದರಿಂದ ನಾನು ಕೊಳೆತುಹೋದ ಪದಾರ್ಥದಂತೆಯೂ ನುಸಿಹಿಡಿದ ಬಟ್ಟೆಯ ಚೂರಿನಂತೆಯೂ ಕ್ಷಯಿಸಿಹೋಗುತ್ತಿದ್ದೇನೆ.”

Kannada Bible 1934
Public Domain: 1934