ಬೈಬಲ್ ಆಯ್ಕೆ
ಹಳೆಯ ಒಡಂಬಡಿಕೆಯಲ್ಲಿ
ಹೊಸ ಒಡಂಬಡಿಕೆ
ಕನ್ನಡ ಬೈಬಲ್ 1934

ಆದಿಕಾಂಡ ೪೯

ಬಳಿಕ ಯಾಕೋಬನು ತನ್ನ ಗಂಡುಮಕ್ಕಳನ್ನು ತನ್ನ ಬಳಿಗೆ ಕರೆಯಿಸಿ, “ನನ್ನ ಎಲ್ಲಾ ಗಂಡುಮಕ್ಕಳೇ, ನನ್ನ ಬಳಿಗೆ ಬನ್ನಿರಿ. ನಿಮಗೆ ಮುಂದೆ ಏನು ಸಂಭವಿಸುವುದೆಂದು ತಿಳಿಸುತ್ತೇನೆ.

“ಯಾಕೋಬನ ಗಂಡುಮಕ್ಕಳೇ, ಒಟ್ಟಾಗಿ ಬಂದು ಕೇಳಿರಿ. ನಿಮ್ಮ ತಂದೆಯಾದ ಇಸ್ರೇಲನು ಹೇಳುವುದನ್ನು ಕೇಳಿರಿ” ಎಂದು ಹೇಳಿದನು.

“ರೂಬೇನನೇ, ನೀನು ನನ್ನ ಚೊಚ್ಚಲು ಮಗ. ನೀನೇ ನನ್ನ ಮೊದಲನೆಯ ಮಗ. ನೀನು ನನ್ನ ಇತರ ಎಲ್ಲಾ ಗಂಡುಮಕ್ಕಳಿಗಿಂತ ಶಕ್ತಿಶಾಲಿಯೂ ಗೌರವಯುತನೂ ಆಗಿರುವೆ.

ಆದರೆ ನೀನು ಪ್ರಳಯದ ಭಯಂಕರವಾದ ಅಲೆಗಳಂತಿರುವೆ. ನೀನು ನನ್ನ ಮಕ್ಕಳಿಗಿಂತ ಅತ್ಯಂತ ಪ್ರಮುಖನಾಗಿರುವುದಿಲ್ಲ. ನಿನ್ನ ತಂದೆಗೆ ಸೇರಿದ ಸ್ತ್ರೀಯೊಂದಿಗೆ ನೀನು ಮಲಗಿಕೊಂಡೆ. ನೀನು ನಿನ್ನ ತಂದೆಯ ಹಾಸಿಗೆಗೆ ಗೌರವವನ್ನು ತೋರಿಸಲಿಲ್ಲ.”

“ಸಿಮೆಯೋನನೂ ಲೇವಿಯೂ ಸಹೋದರರಾಗಿದ್ದಾರೆ. ಅವರು ತಮ್ಮ ಖಡ್ಗಗಳಿಂದ ಹೋರಾಡಲು ಇಷ್ಟಪಡುವರು.

ಅವರು ಗುಟ್ಟಾಗಿ ಕೆಟ್ಟಕಾರ್ಯಗಳನ್ನು ಯೋಚಿಸಿದರು. ಅವರ ರಹಸ್ಯಕೂಟಗಳನ್ನು ನನ್ನ ಆತ್ಮವು ಸ್ವೀಕರಿಸುವುದಿಲ್ಲ. ಅವರು ಕೋಪಗೊಂಡಾಗ ಗಂಡಸರನ್ನು ಕೊಂದುಹಾಕಿದರು. ಅವರು ಮೋಜಿಗೆಂದೇ ಪ್ರಾಣಿಗಳನ್ನು ಹಿಂಸಿಸಿದರು.

ಅವರ ಕೋಪವೇ ಅವರಿಗೆ ಶಾಪ. ಅದು ತುಂಬಾ ಶಕ್ತಿಶಾಲಿಯಾದದ್ದು. ಅವರು ಹುಚ್ಚರಾದಾಗ ತುಂಬಾ ಕ್ರೂರಿಗಳು. ಅವರು ಯಾಕೋಬನ ನಾಡಿನಲ್ಲಿ ತಮ್ಮದೇ ಆದ ನಾಡನ್ನು ಹೊಂದಿಕೊಳ್ಳುವುದಿಲ್ಲ. ಅವರು ಇಸ್ರೇಲಿನಲ್ಲೆಲ್ಲಾ ಹರಡಿಕೊಳ್ಳುವರು.”

“ಯೆಹೂದನೇ, ನಿನ್ನ ಸಹೋದರರು ನಿನ್ನನ್ನೇ ಹೊಗಳುವರು. ನೀನು ನಿನ್ನ ವೈರಿಗಳನ್ನು ಸೋಲಿಸುವೆ. ನಿನ್ನ ಸಹೋದರರು ನಿನಗೇ ಅಡ್ಡಬೀಳುವರು.

ಯೆಹೂದನು ಪ್ರಾಣಿಯನ್ನು ಕೊಂದ ಪ್ರಾಯದ ಸಿಂಹದಂತಿದ್ದಾನೆ. ಮಗನೇ, ನೀನು ಸಿಂಹದಂತೆ ಬೇಟೆಗಾಗಿ ಹೊಂಚುಹಾಕಿ ನಿಂತಿರುವೆ. ಯೆಹೂದನು ಸಿಂಹದಂತಿರುವನು. ಅವನು ಮಲಗಿ ವಿಶ್ರಮಿಸಿಕೊಳ್ಳುವನು; ಅವನನ್ನು ಕೆಣಕಲು ಯಾರಿಗೂ ಧೈರ್ಯವಿಲ್ಲ.

೧೦

ರಾಜದಂಡವನ್ನು ಹಿಡಿಯತಕ್ಕವನು ಬರುವ ತನಕ ಯೆಹೂದನು ರಾಜದಂಡವನ್ನು ಹಿಡಿದುಕೊಳ್ಳುವನು. ಅವನ ಸಂತತಿಯವರು ಶಾಶ್ವತವಾಗಿ ಆಳುವರು; ಅನ್ಯಜನಾಂಗಗಳು ಅವನಿಗೆ ಕಪ್ಪಕಾಣಿಕೆಗಳನ್ನು ತಂದು ಅವನಿಗೆ ವಿಧೇಯರಾಗಿರುವರು.

೧೧

ಅವನು ತನ್ನ ಕತ್ತೆಯನ್ನು ದ್ರಾಕ್ಷೆಬಳ್ಳಿಗೆ ಕಟ್ಟುವನು; ತನ್ನ ಪ್ರಾಯದ ಕತ್ತೆಯನ್ನು ಉತ್ತಮವಾದ ದ್ರಾಕ್ಷೆಬಳ್ಳಿಗೆ ಕಟ್ಟುವನು. ಅವನು ಉತ್ತಮವಾದ ದ್ರಾಕ್ಷಾರಸದಿಂದ ತನ್ನ ಬಟ್ಟೆಗಳನ್ನು ತೊಳೆಯುವನು.

೧೨

ಅವನು ದ್ರಾಕ್ಷಾರಸವನ್ನು ಕುಡಿಯುವುದರಿಂದ ಅವನ ಕಣ್ಣುಗಳು ಕೆಂಪಾಗಿರುತ್ತವೆ. ಅವನು ಹಾಲು ಕುಡಿಯುವುದರಿಂದ ಅವನ ಹಲ್ಲುಗಳು ಬಿಳುಪಾಗಿರುತ್ತವೆ.”

೧೩

“ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಿಸುವನು; ಸಮುದ್ರ ತೀರವು ಅವನ ಹಡಗುಗಳಿಗೆ ಸುರಕ್ಷಿತವಾದ ಸ್ಥಳವಾಗಿದೆ. ಅವನ ನಾಡು ಚೀದೋನ್ ಪಟ್ಟಣದವರೆಗೂ ವಿಸ್ತರಿಸುವುದು.”

೧೪

“ಇಸ್ಸಾಕಾರನು ಬಹಳ ಕಷ್ಟಪಟ್ಟು ದುಡಿಯುವ ಕತ್ತೆಯಂತಿದ್ದಾನೆ. ಅವನು ಭಾರವಾದ ಹೊರೆಯನ್ನು ಹೊರುವುದರಿಂದ ಮಲಗಿ ವಿಶ್ರಮಿಸಿಕೊಳ್ಳುವನು.

೧೫

ಅವನು ತನ್ನ ವಿಶ್ರಾಂತಿಗೆ ಅನುಕೂಲವಾಗಿರುವ ಮತ್ತು ಪ್ರಶಾಂತವಾಗಿರುವ ನಾಡನ್ನು ನೋಡುವನು. ಅವನು ಭಾರವಾದ ಹೊರೆಗಳನ್ನು ಹೊರುವುದಕ್ಕೂ ಗುಲಾಮನಂತೆ ದುಡಿಯುವುದಕ್ಕೂ ಒಪ್ಪಿಕೊಳ್ಳುವನು.”

೧೬

“ಇತರ ಇಸ್ರೇಲರ ಕುಟುಂಬಗಳಿಗೆ ತೀರ್ಪುಮಾಡುವಂತೆ, ದಾನನು ತನ್ನ ಸ್ವಂತ ಜನರಿಗೆ ತೀರ್ಪು ಮಾಡುತ್ತಾನೆ.

೧೭

ದಾನನು ರಸ್ತೆಯ ಬಳಿಯಲ್ಲಿರುವ ಹಾವಿನಂತಿರುವನು.” ದಾರಿಯ ಸಮೀಪದಲ್ಲಿ ಮಲಗಿದ್ದು ಕುದುರೆಯ ಹಿಮ್ಮಡಿಯನ್ನು ಕಚ್ಚಿ ಸವಾರನನ್ನು ಬೀಳಿಸುವ ವಿಷಸರ್ಪದಂತಿರುವನು.

೧೮

“ಯೆಹೋವನೇ, ನಿನ್ನಿಂದುಂಟಾಗುವ ರಕ್ಷಣೆಗಾಗಿ ನಾನು ಕಾಯುತ್ತಿದ್ದೇನೆ.”

೧೯

“ಒಂದು ಕಳ್ಳರ ಗುಂಪು ಗಾದನ ಮೇಲೆ ಆಕ್ರಮಣ ಮಾಡುವುದು. ಆದರೆ ಗಾದನು ಅವರನ್ನು ಓಡಿಸಿ ಬಿಡುವನು.”

೨೦

“ಆಶೇರನ ನಾಡು ಒಳ್ಳೆಯ ಆಹಾರವನ್ನು ಯಥೇಚ್ಛವಾಗಿ ಫಲಿಸುತ್ತದೆ; ರಾಜನಿಗೆ ಸಾಕಾಗುವಷ್ಟು ಒಳ್ಳೆಯ ಆಹಾರವು ಅವನಲ್ಲಿರುವುದು.”

೨೧

“ನಫ್ತಾಲಿಯು ಸ್ವತಂತ್ರವಾಗಿ ಓಡುವ ಜಿಂಕೆಯಂತಿದ್ದಾನೆ. ಅವನ ಮಾತುಗಳು ಅದರ ಸುಂದರವಾದ ಮರಿಗಳಂತಿವೆ.”

೨೨

“ಯೋಸೇಫನು ಬಹು ಯಶಸ್ವಿಯಾಗಿದ್ದಾನೆ. ಯೋಸೇಫನು ಹಣ್ಣನ್ನು ಅಧಿಕವಾಗಿ ಫಲಿಸುವ ದ್ರಾಕ್ಷೆ ಬಳ್ಳಿಯಂತಿರುವನು. ಅವನು ವಸಂತಕಾಲದಲ್ಲಿ ಬೆಳೆಯುವ ದ್ರಾಕ್ಷೆಬಳ್ಳಿಯಂತಿರುವನು. ಅವನು ಗೋಡೆಯ ಆಚೆಗೆ ಚಾಚಿಕೊಂಡಿರುವ ದ್ರಾಕ್ಷೆಬಳ್ಳಿಯಂತಿರುವನು.

೨೩

ಅನೇಕ ಜನರು ಅವನ ವಿರುದ್ಧವಾಗಿ ಹೋರಾಡಿದರು. ಬಿಲ್ಲುಗಳನ್ನು ಹೊಂದಿದ್ದ ಜನರು ಅವನನ್ನು ಇಷ್ಟಪಡಲಿಲ್ಲ.

೨೪

ಆದರೆ ಅವನು ತನ್ನ ಹೋರಾಟದಲ್ಲಿ ಬಲಿಷ್ಠವಾದ ಬಿಲ್ಲಿನಿಂದಲೂ ತನ್ನ ನಿಪುಣವಾದ ತೋಳುಗಳಿಂದಲೂ ಗೆದ್ದನು. ಅವನು ಶಕ್ತಿಯನ್ನು ಯಾಕೋಬನ ಪರಾಕ್ರಮಿಯಿಂದಲೂ ಇಸ್ರೇಲನ ಬಂಡೆಯಾದಾತನಿಂದಲೂ ಕುರುಬನಿಂದಲೂ

೨೫

ನಿಮ್ಮ ತಂದೆಯ ದೇವರಿಂದಲೂ ಪಡೆದುಕೊಳ್ಳುವನು. ದೇವರು ನಿನ್ನನ್ನು ಆಶೀರ್ವದಿಸುವನು. ಸರ್ವಶಕ್ತನಾದ ದೇವರು ನಿನ್ನನ್ನು ಆಶೀರ್ವದಿಸಲಿ. ಆತನು ಮೇಲಿರುವ ಆಕಾಶದಿಂದ ನಿನಗೆ ಆಶೀರ್ವಾದಗಳನ್ನು ಕೊಡಲಿ. ಆತನು ಕೆಳಗಿನ ಆಳವಾದ ಸಾಗರದ ಸೆಲೆಗಳಿಂದಲೂ ನಿನಗೆ ಆಶೀರ್ವಾದಗಳನ್ನು ಕೊಡಲಿ. ಆತನು ನಿನಗೆ ಸ್ತನ್ಯಗಳಿಂದಲೂ ಗರ್ಭದಿಂದಲೂ ಆಶೀರ್ವಾದಗಳನ್ನು ಕೊಡಲಿ.

೨೬

ನನ್ನ ತಂದೆತಾಯಿಗಳಿಗೆ ಅನೇಕಾನೇಕ ಒಳ್ಳೆಯ ಸಂಗತಿಗಳು ಸಂಭವಿಸಿದವು. ನಿನ್ನ ತಂದೆಯಾದ ನಾನು ಅದಕ್ಕಿಂತಲೂ ಹೆಚ್ಚು ಆಶೀರ್ವಾದ ಹೊಂದಿಕೊಂಡೆನು. ನಿನ್ನ ಸಹೋದರರು ನಿನ್ನನ್ನು ದೂರಮಾಡಲು ಪ್ರಯತ್ನಿಸಿದರು. ಆದರೆ ಈಗ ನನ್ನ ಎಲ್ಲಾ ಆಶೀರ್ವಾದಗಳು ನಿನ್ನ ಮೇಲೆ ಎತ್ತರವಾದ ಬೆಟ್ಟದೋಪಾದಿಯಲ್ಲಿ ರಾಶಿಯಂತಿವೆ.”

೨೭

“ಬೆನ್ಯಾಮೀನನು ಹಸಿದಿರುವ ತೋಳದಂತಿದ್ದಾನೆ. ಅವನು ಮುಂಜಾನೆಯಲ್ಲಿ ಕೊಂದು ತಿನ್ನುವನು. ಅವನು ಸಾಯಂಕಾಲ ಮಿಕ್ಕುಳಿದುದ್ದನ್ನು ಹಂಚಿಕೊಳ್ಳುವನು.”

೨೮

ಇವು ಇಸ್ರೇಲನ ಹನ್ನೆರಡು ಕುಲಗಳು. ಈ ವಿಷಯಗಳನ್ನೆಲ್ಲ ಅವರ ತಂದೆಯಾದ ಇಸ್ರೇಲನು ಅವರಿಗೆ ಹೇಳಿದನು. ಅವನು ತನ್ನ ಪ್ರತಿಯೊಬ್ಬ ಗಂಡುಮಗನಿಗೆ ಅವನಿಗೆ ತಕ್ಕ ಆಶೀರ್ವಾದವನ್ನು ಕೊಟ್ಟನು.

೨೯

ಬಳಿಕ ಇಸ್ರೇಲನು ಅವರಿಗೆ ಈ ಆಜ್ಞೆಯನ್ನು ಕೊಟ್ಟನು: “ನಾನು ಸತ್ತಾಗ, ನನ್ನ ಪೂರ್ವಿಕರ ಸಂಗಡವಿರಲು ಇಷ್ಟಪಡುತ್ತೇನೆ. ನನ್ನ ಪೂರ್ವಿಕರಿಗೆ ಸಮಾಧಿ ಮಾಡಿರುವ ಹಿತ್ತಿಯನಾದ ಎಫ್ರೋನನ ಗವಿಯಲ್ಲಿ ನನಗೆ ಸಮಾಧಿಮಾಡಬೇಕು.

೩೦

ಆ ಗವಿಯು ಕಾನಾನ್ ದೇಶದ ಮಮ್ರೆಗೆ ಎದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿದೆ. ಅಬ್ರಹಾಮನು ತನ್ನ ಸಮಾಧಿಗಾಗಿ ಈ ಸ್ಥಳವನ್ನು ಎಫ್ರೋನನಿಂದ ಕೊಂಡುಕೊಂಡನು.

೩೧

ಅಬ್ರಹಾಮನನ್ನು ಮತ್ತು ಅವನ ಹೆಂಡತಿಯಾದ ಸಾರಳನ್ನು ಆ ಗವಿಯಲ್ಲಿ ಸಮಾಧಿ ಮಾಡಲಾಗಿದೆ. ಇಸಾಕನನ್ನು ಮತ್ತು ರೆಬೆಕ್ಕಳನ್ನು ಅಲ್ಲಿ ಸಮಾಧಿ ಮಾಡಲಾಗಿದೆ. ನನ್ನ ಹೆಂಡತಿಯಾದ ಲೇಯಳನ್ನು ನಾನು ಅಲ್ಲಿ ಸಮಾಧಿ ಮಾಡಿದ್ದೇನೆ. ಬೆನ್ಯಾಮೀನ

೩೨

ಆ ಗುಹೆಯನ್ನು ಮತ್ತು ಆ ಗುಹೆಯಿರುವ ಹೊಲವನ್ನು ಹಿತ್ತಿಯರಿಂದ ಕೊಂಡುಕೊಳ್ಳಲಾಗಿದೆ” ಎಂದು ಹೇಳಿದನು.

೩೩

ಯಾಕೋಬನು ತನ್ನ ಗಂಡುಮಕ್ಕಳೊಂದಿಗೆ ಮಾತನಾಡಿದ ಮೇಲೆ ತನ್ನ ಹಾಸಿಗೆಯ ಮೇಲೆ ಕಾಲುಗಳನ್ನು ಮುದುರಿಕೊಂಡು ಪ್ರಾಣಬಿಟ್ಟನು.

Kannada Bible 1934
Public Domain: 1934