ಬೈಬಲ್ ಒಂದು ವರ್ಷದಲ್ಲಿ


ಅಕ್ಟೋಬರ್ ೧೮


ಯೆಶಾಯನ ೫೩:೧-೧೨
೧. ನಾವು ಹೇಳಿದ ಸಂಗತಿಗಳನ್ನು ಯಾರು ನಂಬಿದರು? ಯೆಹೋವನ ದಂಡನೆಯನ್ನು ನಿಜವಾಗಿಯೂ ಸ್ವೀಕರಿಸಿಕೊಂಡವರು ಯಾರು?
೨. ಒಂದು ಸಣ್ಣ ಸಸಿಯು ಬೆಳೆಯುವ ರೀತಿಯಲ್ಲಿ ಯೆಹೋವನ ಮುಂದೆ ಆತನು ಬೆಳೆದನು. ಆತನು ಒಣ ನೆಲದಿಂದ ಚಿಗುರುವ ಬೇರಿನಂತಿದ್ದನು. ಆತನು ಒಬ್ಬ ವಿಶೇಷ ಪುರುಷನಂತೆ ತೋರಲಿಲ್ಲ. ಅಂಥ ಲಕ್ಷಣಗಳೇನೂ ಆತನಲ್ಲಿರಲಿಲ್ಲ. ನಾವು ಆತನನ್ನು ನೋಡಿದಾಗ ಆತನಲ್ಲಿ ನೋಡತಕ್ಕ ಯಾವ ಲಕ್ಷಣವೂ ಕಾಣಲಿಲ್ಲ.
೩. ಜನರು ಆತನನ್ನು ಪರಿಹಾಸ್ಯ ಮಾಡಿದರು. ಆತನ ಸ್ನೇಹಿತರು ಆತನನ್ನು ತೊರೆದರು. ಆತನು ನೋವಿನಿಂದ ಬಳಲಿದನು. ಆತನು ಕಾಯಿಲೆಯಿಂದ ಬಾಧಿತನಾಗಿದ್ದನು. ಜನರು ಆತನ ಕಡೆಗೆ ನೋಡಲೂ ಇಲ್ಲ. ನಾವು ಆತನನ್ನು ಗಮನಕ್ಕೆ ತರಲೇ ಇಲ್ಲ.
೪. ಆದರೆ ಆತನು ನಮ್ಮ ಸಂಕಷ್ಟಗಳನ್ನು ತನ್ನ ಮೇಲೆ ಹೊತ್ತುಕೊಂಡನು. ನಮ್ಮ ಬೇನೆಯನ್ನು ಆತನು ಅನುಭವಿಸಿದನು. ದೇವರು ಆತನನ್ನು ಶಿಕ್ಷಿಸಿದ್ದಾನೆ ಎಂದು ನಾವು ನೆನಸಿದೆವು. ಆತನು ಏನೋ ಮಾಡಿದ್ದಕ್ಕಾಗಿ ದೇವರು ಆತನಿಗೆ ಹೊಡೆದನೆಂದು ಭಾವಿಸಿಕೊಂಡೆವು.
೫. ಆದರೆ ನಾವು ಮಾಡಿದ ದುಷ್ಟತನಕ್ಕಾಗಿಯೇ ಆತನು ಬಾಧಿತನಾದನು. ನಮ್ಮ ಅಪರಾಧಗಳ ನಿಮಿತ್ತ ಆತನು ಜಜ್ಜಲ್ಪಟ್ಟನು. ನಾವು ಹೊಂದಬೇಕಾಗಿದ್ದ ಶಿಕ್ಷೆಯನ್ನು ಆತನೇ ಅನುಭವಿಸಿದನು. ಆತನ ಬಾಸುಂಡೆಗಳಿಂದ ನಮಗೆ ಗುಣವಾಯಿತು.
೬. ನಾವೆಲ್ಲರೂ ಕುರಿಗಳಂತೆ ದಾರಿತಪ್ಪಿ ತೊಳಲಾಡಿದೆವು. ನಮ್ಮ ಸ್ವಂತ ದಾರಿಯಲ್ಲಿ ನಾವು ಹೋದೆವು. ನಮ್ಮ ಅಪರಾಧಗಳಿಂದ ನಾವು ವಿಮುಕ್ತರಾಗುವಂತೆ ಯೆಹೋವನು ನಮ್ಮ ಅಪರಾಧಗಳನ್ನು ಆತನ ಮೇಲೆ ಹಾಕಿದನು.
೭. ಆತನು ಬಾಧೆಯನ್ನೂ ಹಿಂಸೆಯನ್ನೂ ಅನುಭವಿಸಿದನು. ಆದರೂ ಆತನು ಪ್ರತಿಭಟಿಸಲಿಲ್ಲ. ಕೊಯ್ಯಲು ಕೊಂಡೊಯ್ಯುವ ಕುರಿಮರಿಯಂತೆಯೂ ಉಣ್ಣೆಯನ್ನು ಕತ್ತರಿಸುವಾಗ ಮೌನವಾಗಿರುವ ಕುರಿಮರಿಯಂತೆಯೂ ಆತನು ಮೌನವಾಗಿದ್ದನು.
೮. ಜನರು ಬಲವಂತದಿಂದ ಆತನನ್ನು ಕೊಂಡೊಯ್ದರು; ಆತನಿಗೆ ಅನ್ಯಾಯವಾದ ತೀರ್ಪನ್ನು ನೀಡಿದರು; ಆತನನ್ನು ಜೀವಲೋಕದಿಂದಲೇ ತೆಗೆದುಹಾಕಿ ಆತನಿಗೆ ಸಂತಾನವೇ ಇಲ್ಲದಂತೆ ಮಾಡಿದರು. ನನ್ನ ಜನರ ಪಾಪಗಳಿಗಾಗಿ ಆತನು ದಂಡಿಸಲ್ಪಟ್ಟನು.
೯. ಆತನು ಸತ್ತ ಬಳಿಕ ಧನಿಕರೊಂದಿಗೂ ದುಷ್ಟರೊಂದಿಗೂ ಹೂಳಲ್ಪಟ್ಟನು. ಆತನು ಯಾವ ಅಪರಾಧವನ್ನೂ ಮಾಡಲಿಲ್ಲ; ಸುಳ್ಳಾಡಲಿಲ್ಲ. ಆದರೂ ಇವೆಲ್ಲವೂ ಆತನಿಗೆ ಸಂಭವಿಸಿದವು.
೧೦. ಆತನನ್ನು ಬಾಧೆಯಿಂದ ಜಜ್ಜಬೇಕೆಂಬುದು ಯೆಹೋವನ ನಿರ್ಧಾರವಾಗಿತ್ತು. ಆದ್ದರಿಂದ ಈ ಸೇವಕನು ತನ್ನನ್ನು ಮರಣಕ್ಕೆ ಒಪ್ಪಿಸಿಕೊಟ್ಟನು. ಆದರೆ ಆತನು ತನ್ನ ಹೊಸ ಜೀವಿತದಲ್ಲಿ ಚಿರಂಜೀವಿಯಾಗುವನು. ಆತನು ತನ್ನ ಜನರನ್ನು ದೃಷ್ಟಿಸಿ ನೋಡುವನು. ಯೆಹೋವನ ಸಂಕಲ್ಪದ ಮೇರೆಗೆ ಎಲ್ಲವನ್ನೂ ಆತನು ಮಾಡುವನು.
೧೧. ಆತನು ತನ್ನ ಆತ್ಮದಲ್ಲಿ ಬಹಳವಾಗಿ ಸಂಕಟಪಡುವನು. ಆದರೆ ಒಳ್ಳೆಯ ಕಾರ್ಯಗಳಾಗುವುದನ್ನು ಆತನು ನೋಡುವನು. ತಾನು ಕಲಿತ ವಿಷಯಗಳಲ್ಲಿ ಸಂತುಷ್ಟನಾಗುವನು. ಅನೇಕರು ತಮ್ಮ ಪಾಪಗಳಿಂದ ಬಿಡುಗಡೆ ಹೊಂದುವಂತೆ ನನ್ನ ಒಳ್ಳೇ ಸೇವಕನು ಮಾಡುವನು. ಅವರ ಪಾಪಗಳನ್ನು ಹೊತ್ತುಕೊಂಡು ಹೋಗುವನು.
೧೨. ಈ ಕಾರಣಕ್ಕಾಗಿ ನಾನು ಆತನನ್ನು ಜನರ ಮಧ್ಯದಲ್ಲಿ ಪ್ರಸಿದ್ಧಿಪಡಿಸುವೆನು. ಆತನು ಬಲಿಷ್ಠರೊಂದಿಗೆ ಸಮಪಾಲನ್ನು ಹೊಂದುವನು. ಆತನು ಜನರಿಗಾಗಿ ತನ್ನ ಪ್ರಾಣವನ್ನು ಕೊಟ್ಟು ಸತ್ತದ್ದಕ್ಕಾಗಿ ನಾನು ಆತನಿಗೆ ಹೀಗೆ ಮಾಡುವೆನು. ಜನರು ಆತನನ್ನು ಅಪರಾಧಿ ಎಂದು ಹೇಳಿದರೂ ವಾಸ್ತವವಾಗಿ ಆತನು ಬಹುಜನರ ಪಾಪಗಳನ್ನು ಹೊತ್ತುಕೊಂಡು ಹೋದನು. ಈಗ ಆತನು ಪಾಪಮಾಡಿದ ಜನರಿಗಾಗಿ ಪ್ರಾರ್ಥನಾಪೂರ್ವಕವಾಗಿ ವಿಜ್ಞಾಪಿಸುವನು.

ಯೆಶಾಯನ ೫೪:೧-೧೭
೧. ಬಂಜೆಯೇ, ಸಂತೋಷಿಸು, ನಿನಗೆ ಮಕ್ಕಳಿಲ್ಲ. ಆದ್ದರಿಂದ ನೀನು ಬಹಳವಾಗಿ ಸಂತೋಷಿಸು. ಯೆಹೋವನು ಹೇಳುವುದೇನೆಂದರೆ, “ಗಂಡ ಬಿಟ್ಟಿರುವ ಹೆಂಗಸಿಗೆ ಮದುವೆಯಾದ ಹೆಂಗಸಿಗಿಂತ ಹೆಚ್ಚು ಮಕ್ಕಳಿರುವರು.”
೨. ನಿನ್ನ ಡೇರೆಗಳನ್ನು ವಿಸ್ತರಿಸು. ನಿನ್ನ ಬಾಗಿಲುಗಳನ್ನು ಅಗಲವನ್ನಾಗಿ ಮಾಡು. ನಿನ್ನ ಮನೆಯನ್ನು ಅಭಿವೃದ್ಧಿಪಡಿಸು. ನಿನ್ನ ಡೇರೆಯನ್ನು ದೊಡ್ಡದಾಗಿಯೂ ಬಲವಾಗಿಯೂ ಮಾಡು.
೩. ಯಾಕೆಂದರೆ ನೀನು ಅಧಿಕವಾಗಿ ಬೆಳೆಯುವಿ. ನಿನ್ನ ಮಕ್ಕಳು ಅನೇಕ ಜನಾಂಗಗಳನ್ನು ವಶಮಾಡಿಕೊಳ್ಳುವರು. ಕೆಡವಿಹಾಕಿದ ಪಟ್ಟಣಗಳಲ್ಲಿ ನಿನ್ನ ಮಕ್ಕಳು ತಿರಿಗಿ ವಾಸಿಸುವರು.
೪. ಹೆದರಬೇಡ, ನೀನು ನಿರಾಶಳಾಗುವದಿಲ್ಲ. ಜನರು ನಿನ್ನ ವಿಷಯವಾಗಿ ಕೆಟ್ಟದ್ದನ್ನು ಆಡುವದಿಲ್ಲ. ನೀನು ಬೇಸರಗೊಳ್ಳುವದಿಲ್ಲ. ನೀನು ಯೌವ್ವನಸ್ಥಳಾಗಿರುವಾಗ ನಿನಗೆ ನಾಚಿಕೆಯಾಯಿತು. ಆದರೆ ಈಗ ನೀನು ಆ ನಾಚಿಕೆಯನ್ನು ಮರೆತುಬಿಟ್ಟವಳಾಗಿದ್ದಿ. ನಿನ್ನ ಗಂಡನನ್ನು ನೀನು ಕಳೆದುಕೊಂಡಾಗ ನೀನು ಪಟ್ಟ ನಾಚಿಕೆಯನ್ನು ಜ್ಞಾಪಕ ಮಾಡಿಕೊಳ್ಳುವದಿಲ್ಲ.
೫. ಯಾಕೆಂದರೆ ನಿನ್ನ ಗಂಡನೇ (ದೇವರು) ನಿನ್ನನ್ನು ನಿರ್ಮಿಸಿದನು. ಆತನ ಹೆಸರು ಸರ್ವಶಕ್ತನಾದ ಯೆಹೋವನು. ಆತನು ಇಸ್ರೇಲನ್ನು ಕಾಪಾಡುವಾತನಾಗಿದ್ದಾನೆ. ಆತನು ಇಸ್ರೇಲಿನ ಪರಿಶುದ್ಧ ದೇವರಾಗಿದ್ದಾನೆ. ಆತನನ್ನು “ಇಡೀ ಭೂಲೋಕದ ದೇವರು” ಎಂದು ಕರೆಯುವರು.
೬. ನೀನು ಗಂಡಬಿಟ್ಟ ಹೆಂಗಸಿನಂತಿದ್ದಿ. ನಿನ್ನ ಆತ್ಮದಲ್ಲಿ ನೀನು ತುಂಬಾ ದುಃಖಿತಳಾಗಿದ್ದಿ. ಆದರೆ ಯೆಹೋವನು ನಿನ್ನನ್ನು ತನ್ನವಳನ್ನಾಗಿ ಮಾಡಲು ಕರೆದನು. ಎಳೇ ಪ್ರಾಯದಲ್ಲಿ ಮದುವೆಯಾದ ಮತ್ತು ಗಂಡಬಿಟ್ಟ ಹೆಂಗಸಿನಂತೆ ನೀನಿದ್ದಿ. ಆದರೆ ದೇವರು ತನ್ನವಳನ್ನಾಗಿ ಮಾಡಿಕೊಳ್ಳಲು ನಿನ್ನನ್ನು ಕರೆದನು.
೭. ದೇವರು ಹೇಳುವುದೇನೆಂದರೆ: “ನಾನು ನಿನ್ನನ್ನು ತೊರೆದೆನು. ಆದರೆ ಸ್ವಲ್ಪ ಸಮಯಕ್ಕಾಗಿ ಮಾತ್ರ. ನಿನ್ನನ್ನು ಮತ್ತೆ ನನಗಾಗಿ ಒಟ್ಟುಗೂಡಿಸುವೆನು. ಆಗ ನಿನಗೆ ಅತ್ಯಂತ ದಯೆಯನ್ನು ತೋರಿಸುವೆನು.
೮. ನಾನು ತುಂಬಾ ಸಿಟ್ಟುಗೊಂಡಿದ್ದೆನು ಮತ್ತು ಸ್ವಲ್ಪ ಕಾಲಕ್ಕೆ ನಿನಗೆ ಮರೆಯಾದೆನು. ಆದರೆ ನಿನ್ನನ್ನು ಕರುಣೆಯಿಂದ ನಿರಂತರವೂ ಸಂತೈಸುವೆನು.” ನಿನ್ನ ರಕ್ಷಕನಾದ ಯೆಹೋವನ ನುಡಿಗಳಿವು.
೯. ದೇವರು ಹೇಳುವುದೇನೆಂದರೆ: “ನೋಹನ ಕಾಲದಲ್ಲಿ ನಾನು ಲೋಕವನ್ನು ಜಲಪ್ರವಾಹದ ಮೂಲಕ ಶಿಕ್ಷಿಸಿದ್ದನ್ನು ಜ್ಞಾಪಕಮಾಡಿಕೊ. ಆ ಬಳಿಕ ನಾನು ನೋಹನಿಗೆ ಪ್ರಪಂಚವನ್ನು ಜಲಪ್ರವಾಹದಿಂದ ಇನ್ನೆಂದಿಗೂ ನಾಶಪಡಿಸುವದಿಲ್ಲ ಎಂದು ಪ್ರಮಾಣ ಮಾಡಿದೆನು. ಅದೇ ರೀತಿಯಲ್ಲಿ ಇನ್ನೆಂದಿಗೂ ನಿನ್ನ ಮೇಲೆ ಕೋಪಗೊಳ್ಳುವುದಿಲ್ಲವೆಂತಲೂ ನಿನ್ನನ್ನು ಗದರಿಸುವುದಿಲ್ಲವೆಂತಲೂ ನಾನು ನಿನಗೆ ಪ್ರಮಾಣ ಮಾಡುತ್ತೇನೆ.”
೧೦. ಯೆಹೋವನು ಹೇಳುವುದೇನೆಂದರೆ, “ಪರ್ವತಗಳು ಇಲ್ಲದೆ ಹೋದರೂ ಬೆಟ್ಟಗಳು ಧೂಳಾದರೂ ನನ್ನ ಕೃಪೆಯು ನಿನ್ನನ್ನು ಎಂದಿಗೂ ತೊರೆಯದು. ನಾನು ನಿನ್ನೊಂದಿಗೆ ನಿತ್ಯಕಾಲದ ಸಮಾಧಾನದಲ್ಲಿ ಇರುವೆನು.” ಯೆಹೋವನು ನಿನಗೆ ಕರುಣೆಯನ್ನು ತೋರುವನು. ಈ ಸಂಗತಿಗಳನ್ನು ಆತನೇ ಹೇಳಿದ್ದಾನೆ.
೧೧. ಬಡನಗರಿಯೇ, ನಿನ್ನ ವೈರಿಗಳು ನಿನಗೆ ವಿರೋಧವಾಗಿ ಬಿರುಗಾಳಿಯಂತೆ ಬಂದಾಗ ಯಾರೂ ನಿನ್ನನ್ನು ಸಂತೈಸಲಿಲ್ಲ. ಆದರೆ ನಾನು ಮತ್ತೆ ನಿನ್ನನ್ನು ನಿರ್ಮಿಸುವೆನು. ನಿನ್ನ ಗೋಡೆಗಳ ಕಲ್ಲುಗಳನ್ನು ಕಟ್ಟಲು ಸುಂದರವಾದ ಗಾರೆಯನ್ನು ಉಪಯೋಗಿಸುವೆನು. ನಾನು ಅಡಿಪಾಯ ಹಾಕುವಾಗ ಮಾಣಿಕ್ಯಗಳನ್ನು ಹಾಕುವೆನು.
೧೨. ಗೋಡೆಯ ಮೇಲಿರುವ ಕಲ್ಲುಗಳೆಲ್ಲಾ ಕೆಂಪು ಕಲ್ಲುಗಳೇ. ಹೊಳೆಯುವ ವಜ್ರಗಳಿಂದ ನಾನು ಹೊರಬಾಗಲನ್ನು ತಯಾರಿಸುವೆನು. ನಿನ್ನ ಸುತ್ತಲೂ ನಾನು ಅಮೂಲ್ಯವಾದ ಕಲ್ಲುಗಳಿಂದ ಗೋಡೆಯನ್ನು ಕಟ್ಟುವೆನು.
೧೩. ನಿನ್ನ ಮಕ್ಕಳು ದೇವರನ್ನು ಅನುಸರಿಸುವರು. ಆತನು ಅವರಿಗೆ ಬೋಧಿಸುವನು. ನಿನ್ನ ಮಕ್ಕಳಿಗೆ ನಿಜವಾದ ಶಾಂತಿ ಇರುವದು.
೧೪. ನೀನು ಒಳ್ಳೆಯತನದಿಂದ ಕಟ್ಟಲ್ಪಡುವೆ. ಆದ್ದರಿಂದ ಎಲ್ಲಾ ದುಷ್ಟತ್ವಗಳಿಂದ ನೀನು ಸುರಕ್ಷಿತಳಾಗಿರುವೆ. ನೀನು ಯಾವುದಕ್ಕೂ ಹೆದರುವ ಅವಶ್ಯವಿಲ್ಲ. ಯಾವುದೂ ನಿನಗೆ ಹಾನಿಮಾಡದು.
೧೫. ನಿನಗೆ ವಿರುದ್ಧವಾಗಿ ನನ್ನ ಯಾವ ಸೈನ್ಯವೂ ಯುದ್ಧಮಾಡದು. ಯಾರಾದರೂ ನಿನ್ನ ಮೇಲೆ ಆಕ್ರಮಣ ಮಾಡಿದರೆ ಆ ಶತ್ರುವನ್ನು ನೀನು ಗೆಲ್ಲುವೆ.
೧೬. “ಇಗೋ, ನಾನು ಕಮ್ಮಾರನನ್ನು ಮಾಡಿದೆನು. ಅವನು ಬೆಂಕಿಯನ್ನು ಊದಿ ಬಿಸಿಯನ್ನು ಹೆಚ್ಚಿಸುವನು. ಆಮೇಲೆ ಕೆಂಪಾಗಿ ಕಾದ ಕಬ್ಬಿಣವನ್ನು ಹೊರತೆಗೆದು ತನಗಿಷ್ಟವಾದ ಉಪಕರಣವನ್ನು ತಯಾರಿಸುವನು. ಅದೇ ರೀತಿಯಲ್ಲಿ ನಾಶಮಾಡುವ ‘ನಾಶಕನನ್ನು’ ನಾನು ನಿರ್ಮಿಸಿದೆನು.
೧೭. “ನಗೆ ವಿರುದ್ಧವಾಗಿ ಯುದ್ಧಮಾಡಲು ಜನರು ಆಯುಧಗಳನ್ನು ತಯಾರಿಸುವರು. ಆದರೆ ಆ ಆಯುಧಗಳು ನಿನ್ನನ್ನು ಸೋಲಿಸಲಾರವು. ಅವರು ನಿನಗೆ ವಿರುದ್ಧವಾಗಿ ಮಾತಾಡಿದರೂ ಆ ಮಾತುಗಳು ನಿನ್ನನ್ನು ತಪ್ಪಿತಸ್ಥಳೆಂದು ತೋರಿಸಲಾರವು. “ಯೆಹೋವನ ಸೇವಕರಿಗೆ ದೊರೆಯುವುದೇನು? ಅವರಿಗೆ ಆತನಿಂದಲೇ ಸುಫಲಗಳು ದೊರೆಯುತ್ತವೆ” ಎಂದು ಯೆಹೋವನು ಅನ್ನುತ್ತಾನೆ.

ಕೀರ್ತನೆಗಳು ೧೧೩:೧-೪
೧. ಯೆಹೋವನಿಗೆ ಸ್ತೋತ್ರವಾಗಲಿ! ಯೆಹೋವನ ಸೇವಕರೇ, ಆತನಿಗೆ ಸ್ತೋತ್ರಮಾಡಿರಿ! ಆತನ ಹೆಸರನ್ನು ಕೊಂಡಾಡಿರಿ.
೨. ಯೆಹೋವನ ಹೆಸರು ಇಂದಿಗೂ ಎಂದೆಂದಿಗೂ ಸ್ತುತಿಸಲ್ಪಡಲಿ.
೩. ಪೂರ್ವದಿಂದಿಡಿದು ಪಶ್ಚಿಮದವರೆಗೂ ಯೆಹೋವನ ಹೆಸರು ಸ್ತುತಿಸಲ್ಪಡಲಿ.
೪. ಯೆಹೋವನು ಎಲ್ಲಾ ಜನಾಂಗಗಳಲ್ಲಿ ಮಹೋನ್ನತನಾಗಿದ್ದಾನೆ; ಆತನ ಮಹಿಮೆಯು ಮೇಲೋಕದಲ್ಲಿ ಮೆರೆಯುತ್ತಿದೆ.

ಜ್ಞಾನೋಕ್ತಿಗಳು ೨೬:೧೭-೧೯
೧೭. ಬೇರೆಯವರ ವಾಗ್ವಾದದಲ್ಲಿ ಮಧ್ಯೆ ಪ್ರವೇಶಿಸಲು ಮಾಡುವ ಪ್ರಯತ್ನ ಹಾದಿಯಲ್ಲಿ ಹೋಗುತ್ತಿರುವ ನಾಯಿಯ ಕಿವಿಗಳನ್ನು ಹಿಡಿದುಕೊಳ್ಳುವಷ್ಟೇ ಅಪಾಯಕರ.
೧೮. ವೇ ಇಲ್ಲ.ಮಾತುಗಳಾಗಿವೆ. ನನ್ನ ಮಾತುಗಳಲ್ಲಿ ತಪ್ಪಾಗಲಿಕೊಲ್ಲುವ ಹುಚ್ಚನಂತಿರುವನು. (Verses 18-19)
೧೯. See verse 18

ಎಫೆಸಿಯರಿಗೆ ೩:೧-೨೧
೧. ನಾನು ಕ್ರಿಸ್ತಯೇಸುವಿನ ಸೆರೆಯಾಳು. ಯೆಹೂದ್ಯರಲ್ಲದ ನಿಮಗೋಸ್ಕರ ನಾನು ಸೆರೆಯಾಳಾಗಿದ್ದೇನೆ.
೨. ದೇವರು ತನ್ನ ಕೃಪೆಯ ಮೂಲಕ ನನಗೆ ಈ ಕೆಲಸವನ್ನು ಕೊಟ್ಟನೆಂಬುದು ನಿಮಗೆ ಖಂಡಿತವಾಗಿ ತಿಳಿದಿದೆ. ನಿಮಗೆ ಸಹಾಯ ಮಾಡುವುದಕ್ಕಾಗಿ ದೇವರು ಈ ಕೆಲಸವನ್ನು ನನಗೆ ಕೊಟ್ಟನು.
೩. ದೇವರು ತನ್ನ ರಹಸ್ಯವಾದ ಯೋಜನೆಯನ್ನು ನನಗೆ ತಿಳಿಸಿದನು ಮತ್ತು ತೋರಿಸಿದನು. ಇದರ ಬಗ್ಗೆ ನಾನು ಆಗಲೇ ನಿಮಗೆ ಸ್ವಲ್ಪ ಬರೆದಿದ್ದೇನೆ.
೪. ನಾನು ಬರೆದಿರುವ ಈ ಸಂಗತಿಗಳನ್ನು ನೀವು ಓದಿದರೆ ಕ್ರಿಸ್ತನ ರಹಸ್ಯವಾದ ಸತ್ಯವನ್ನು ನಾನು ನಿಜವಾಗಿಯೂ ಅರ್ಥಮಾಡಿಕೊಂಡಿದ್ದೇನೆ ಎಂಬುದು ನಿಮಗೇ ತಿಳಿಯುತ್ತದೆ.
೫. ಹಿಂದಿನ ಕಾಲಗಳಲ್ಲಿದ್ದ ಜನರಿಗೆ ಆ ರಹಸ್ಯಸತ್ಯವನ್ನು ಆತನು ತಿಳಿಸಲಿಲ್ಲ. ಈಗಲಾದರೊ ದೇವರು ತನ್ನ ಆತ್ಮನ ಮೂಲಕವಾಗಿ ಆ ರಹಸ್ಯಸತ್ಯವನ್ನು ತನ್ನ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ತೋರಿಸಿದ್ದಾನೆ.
೬. ಇದು ಆ ರಹಸ್ಯಸತ್ಯ: ಯೆಹೂದ್ಯರಲ್ಲದವರು ಸುವಾರ್ತೆಯ ಮೂಲಕ ಕ್ರಿಸ್ತಯೇಸುವಿನಲ್ಲಿ ಇರುವವರಾಗಿ ಯೆಹೂದ್ಯರೊಂದಿಗೆ ಬಾಧ್ಯರೂ ಒಂದೇ ದೇಹಕ್ಕೆ ಸೇರಿದವರೂ ಅಬ್ರಹಾಮನಿಗುಂಟಾದ ವಾಗ್ದಾನದಲ್ಲಿ ಪಾಲುಗಾರರೂ ಆಗಿದ್ದಾರೆ.
೭. ದೇವರು ನೀಡಿದ ವಿಶೇಷವಾದ ಕೃಪಾವರದಿಂದ ನಾನು ಸುವಾರ್ತೆಯನ್ನು ತಿಳಿಸಲು ಸೇವಕನಾದೆನು. ದೇವರು ತನ್ನ ಶಕ್ತಿಯನ್ನು ಪ್ರಯೋಗಿಸಿ ನನಗೆ ಆ ಕೃಪಾವರವನ್ನು ಕೊಟ್ಟನು.
೮. ದೇವಜನರಲ್ಲಿ ನಾನೇ ಅತ್ಯಲ್ಪನು. ಕ್ರಿಸ್ತನ ಐಶ್ವರ್ಯವನ್ನು ಕುರಿತಾದ ಸುವಾರ್ತೆಯನ್ನು ನಾನು ಯೆಹೂದ್ಯರಲ್ಲದವರಿಗೆ ತಿಳಿಸಬೇಕೆಂದು ದೇವರು ನನಗೆ ಈ ಕೃಪಾವರವನ್ನು ಕೊಟ್ಟನು. ಆ ಐಶ್ವರ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ.
೯. ರಹಸ್ಯವಾಗಿದ್ದ ತನ್ನ ಯೋಜನೆಯನ್ನು ಜನರೆಲ್ಲರಿಗೆ ತಿಳಿಸಬೇಕೆಂಬ ಕೆಲಸವನ್ನು ದೇವರು ನನಗೆ ಕೊಟ್ಟನು. ಆದಿಯಿಂದಲೂ ಅದು ದೇವರಲ್ಲಿ ಮರೆಯಾಗಿತ್ತು. ಪ್ರತಿಯೊಂದನ್ನೂ ಸೃಷ್ಟಿಸಿದಾತನು ದೇವರೇ.
೧೦. ತನ್ನ ನಾನಾ ವಿಧವಾದ ಜ್ಞಾನವು ಆಕಾಶಮಂಡಲದಲ್ಲಿರುವ ಎಲ್ಲಾ ಅಧಿಪತಿಗಳಿಗೂ ಅಧಿಕಾರಿಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶವಾಗಿತ್ತು.
೧೧. ಅನಾದಿಕಾಲದಿಂದಲೂ ಇದೇ ದೇವರ ಯೋಜನೆಯಾಗಿತ್ತು. ದೇವರು ನಮ್ಮ ಪ್ರಭುವಾದ ಯೇಸು ಕ್ರಿಸ್ತನ ಮೂಲಕ ತನ್ನ ಯೋಜನೆಗನುಸಾರವಾಗಿ ಮಾಡಿದನು.
೧೨. ನಾವು ಕ್ರಿಸ್ತನಲ್ಲಿರುವ ನಂಬಿಕೆಯ ಮೂಲಕ ದೇವರ ಬಳಿಗೆ ಸ್ವತಂತ್ರದಿಂದ ಮತ್ತು ನಿರ್ಭಯದಿಂದ ಹೋಗಲು ಸಾಧ್ಯವಾಯಿತು.
೧೩. ಹೀಗಿರಲಾಗಿ ನಾನು ನಿಮಗೋಸ್ಕರ ಅನುಭವಿಸುತ್ತಿರುವ ಕಷ್ಟಗಳನ್ನು ನೋಡಿ ನಿರಾಶರಾಗಿ ಧೈರ್ಯಗೆಡಬೇಡಿ. ನನ್ನ ಕಷ್ಟಗಳು ನಿಮಗೆ ಘನತೆಯನ್ನು ಉಂಟುಮಾಡುತ್ತವೆ.
೧೪. ಆದ್ದರಿಂದ ತಂದೆಯ ಮುಂದೆ ಮೊಣಕಾಲೂರಿ ಪ್ರಾರ್ಥಿಸುತ್ತೇನೆ.
೧೫. ಭೂಪರಲೋಕಗಳಲ್ಲಿರುವ ಪ್ರತಿಯೊಂದು ಕುಟುಂಬವು ಆತನಿಂದ ತನ್ನ ನಿಜ ಹೆಸರನ್ನು ಪಡೆದುಕೊಳ್ಳುತ್ತದೆ.
೧೬. ನೀವು ನಿಮ್ಮ ಆತ್ಮಗಳಲ್ಲಿ ಬಲವಾಗಿರಲು ಅಗತ್ಯವಾದ ಶಕ್ತಿಯನ್ನು ತನ್ನ ಮಹಿಮಾತಿಶಯದ ಪ್ರಕಾರ ಕೊಡಬೇಕೆಂದು ತಂದೆಯನ್ನು ಕೇಳಿಕೊಳ್ಳುತ್ತೇನೆ. ಆತನು ತನ್ನ ಆತ್ಮನ ಮೂಲಕವಾಗಿ ನಿಮಗೆ ಆ ಶಕ್ತಿಯನ್ನು ಕೊಡುತ್ತಾನೆ.
೧೭. ನಿಮ್ಮ ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಬೇಕೆಂದು ಪ್ರಾರ್ಥಿಸುತ್ತೇನೆ. ನಿಮ್ಮ ಜೀವಿತವು ಪ್ರೀತಿಯಲ್ಲಿ ಬಲವಾಗಿ ಬೇರೂರಿರಬೇಕೆಂದು ಮತ್ತು ಪ್ರೀತಿಯ ಮೇಲೆ ಕಟ್ಟಲ್ಪಟ್ಟಿರಬೇಕೆಂದು ಪ್ರಾರ್ಥಿಸುತ್ತೇನೆ.
೧೮. ನೀವು ಮತ್ತು ದೇವರ ಪರಿಶುದ್ಧ ಜನರೆಲ್ಲರೂ ಕ್ರಿಸ್ತನ ಪ್ರೀತಿಯ ಮಹತ್ವವನ್ನು ಅರ್ಥಮಾಡಿಕೊಳ್ಳಲು ಬೇಕಾದ ಶಕ್ತಿಯನ್ನು ಹೊಂದಿದವರಾಗಿರಬೇಕೆಂದು ಪ್ರಾರ್ಥಿಸುತ್ತೇನೆ. ಕ್ರಿಸ್ತನ ಪ್ರೀತಿಯ ಉದ್ದಗಲಗಳನ್ನು ಮತ್ತು ಆಳ ಎತ್ತರಗಳನ್ನು ನೀವು ಅರ್ಥಮಾಡಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ.
೧೯. ಕ್ರಿಸ್ತನ ಪ್ರೀತಿಯನ್ನು ಮನುಷ್ಯನು ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ ಆ ಪ್ರೀತಿಯನ್ನು ನೀವು ತಿಳಿದುಕೊಳ್ಳಶಕ್ತರಾಗಲೆಂದು ಪ್ರಾರ್ಥಿಸುತ್ತೇನೆ. ಆಗ ನೀವು ದೇವರ ಸಂಪೂರ್ಣತೆಯಿಂದ ತುಂಬಿದವರಾಗಲು ಸಾಧ್ಯವಾಗುತ್ತದೆ.
೨೦. ನಮ್ಮಲ್ಲಿ ಕಾರ್ಯಮಾಡುತ್ತಿರುವ ತನ್ನ ಶಕ್ತಿಯಿಂದ ನಾವು ಕೇಳುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಎಷ್ಟೋ ಹೆಚ್ಚೆಚ್ಚಾಗಿ ದೇವರು ಮಾಡಬಲ್ಲನು.
೨೧. ಆತನಿಗೆ ಸಭೆಯಲ್ಲಿಯೂ ಕ್ರಿಸ್ತ ಯೇಸುವಿನಲ್ಲಿಯೂ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಸ್ತೋತ್ರವಾಗಲಿ. ಆಮೆನ್.